

ಔರಂಗಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಭಾರತೀಯ ಸೇನೆ ಸಹ ಶೇ.10 ರಷ್ಟು ಜನರಿಂದ ನಿಯಂತ್ರಿಸಲ್ಪಡುತ್ತದೆ' ಎಂದು ಹೇಳುವ ಮೂಲಕ ಮಂಗಳವಾರ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ
ಇಂದು ಬಿಹಾರದ ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಲೋಕಸಭೆ ಪ್ರತಿಪಕ್ಷದ ನಾಯಕ, ಮುಖ್ಯವಾಗಿ ಮೇಲ್ಜಾತಿಗಳಿಂದ ಬಂದವರು ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಇದರಲ್ಲಿ ಸಶಸ್ತ್ರ ಪಡೆಗಳು ಸೇರಿವೆ ಎಂದು ಹೇಳಿದರು.
"ದೇಶದ ಜನಸಂಖ್ಯೆಯ ಕೇವಲ ಶೇ. 10 ರಷ್ಟು ಮೇಲ್ಜಾತಿಯ ಜನರು, ಕಾರ್ಪೊರೇಟ್ ವಲಯ, ಅಧಿಕಾರಶಾಹಿ ಮತ್ತು ನ್ಯಾಯಾಂಗದಲ್ಲಿ ಉನ್ನತ ಅವಕಾಶಗಳನ್ನು ಪಡೆಯುತ್ತಾರೆ. ಭಾರತೀಯ ಸೇನೆ ಕೂಡ ಅವರ ನಿಯಂತ್ರಣದಲ್ಲಿದೆ" ಎಂದು ಆರೋಪಿಸಿದರು.
ಹಿಂದುಳಿದ ವರ್ಗಗಳು, ದಲಿತರು, ಪರಿಶಿಷ್ಟ ಪಂಗಡಗಳು ಮತ್ತು ಇತರ ಅಲ್ಪಸಂಖ್ಯಾತರನ್ನು ಒಳಗೊಂಡ ಉಳಿದ ಶೇ. 90 ರಷ್ಟು ಭಾರತೀಯರು ಹೆಚ್ಚಾಗಿ ಪ್ರಮುಖ ಸ್ಥಾನಗಳಿಂದ ಹೊರಗುಳಿದಿದ್ದಾರೆ ಎಂದು ರಾಹುಲ್ ಗಾಂಧಿ ವಾದಿಸಿದರು.
ರಾಷ್ಟ್ರೀಯ ಜಾತಿ ಜನಗಣತಿಯ ಬೇಡಿಕೆಯನ್ನು ಪುನರುಚ್ಚರಿಸಿದ ರಾಹುಲ್ ಗಾಂಧಿ, ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂವಿಧಾನವನ್ನು ರಕ್ಷಿಸಲು ಅಂತಹ ದತ್ತಾಂಶದ ಅತ್ಯಗತ್ಯ ಇದೆ ಎಂದರು.
"ಆಡಳಿತದ ಪ್ರಮುಖ ಸ್ಥಾನಗಳಲ್ಲಿ ಎಷ್ಟು ಜನ ದಲಿತರು, ಒಬಿಸಿಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಇದ್ದಾರೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಶೇ. 90 ರಷ್ಟು ಜನರಿಗೆ ಭಾಗವಹಿಸುವ ಹಕ್ಕುಗಳಿಲ್ಲದಿದ್ದರೆ, ಸಂವಿಧಾನ ರಕ್ಷಿಸಲು ಸಾಧ್ಯವಿಲ್ಲ" ಎಂದರು.
"ಭಾರತದ ಅಗ್ರ 500 ಕಂಪನಿಗಳಲ್ಲಿ ದಲಿತರೇ ಇಲ್ಲ. ಇದು ಅವಕಾಶಗಳನ್ನು ಪಡೆಯುವಲ್ಲಿ ಆಳವಾಗಿ ಬೇರೂರಿರುವ ಅಸಮಾನತೆ" ಎಂದು ಅವರು ವಿವರಿಸಿದ್ದಾರೆ.
Advertisement