

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಇಂಡಿಯಾ ಬ್ಲಾಕ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ಗಿಂತ ಪ್ರತಿ ಕ್ವಿಂಟಾಲ್‌ಗೆ ಭತ್ತಕ್ಕೆ 300 ರೂಪಾಯಿ ಮತ್ತು ಗೋಧಿಗೆ 400 ರೂಪಾಯಿ ಬೋನಸ್ ನೀಡಲಾಗುವುದು ಎಂದು ಬಿಹಾರದ ಆರ್‌ಜೆಡಿ ನಾಯಕ ಮತ್ತು ಇಂಡಿಯಾ ಬ್ಲಾಕ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.
ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನಕ್ಕೆ ಇನ್ನು ಎರಡು ದಿನ ಬಾಕಿ ಉಳಿದಿದ್ದು, ಅದಕ್ಕೆ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, ಎಲ್ಲಾ ಪ್ರಾಥಮಿಕ ಕೃಷಿ ಸಾಲ ಸಂಘಗಳು (PACS) ಮತ್ತು ಪ್ರಾಥಮಿಕ ಮಾರುಕಟ್ಟೆ ಸಹಕಾರ ಸಂಘಗಳ (Vyapar Mandals) ಮುಖ್ಯಸ್ಥರಿಗೆ "ಜನಪ್ರತಿನಿಧಿಗಳ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದರು.
ಪ್ರತಿಯೊಬ್ಬ ರೈತನಿಗೆ ಕನಿಷ್ಠ ಬೆಂಬಲ ಬೆಲೆಗಿಂತ ಭತ್ತಕ್ಕೆ 300 ರೂಪಾಯಿ ಮತ್ತು ಗೋಧಿಗೆ 400 ರೂಪಾಯಿ ಹೆಚ್ಚು ಸಿಗುವಂತೆ ನಾವು ಖಚಿತಪಡಿಸುತ್ತೇವೆ. ಇದರೊಂದಿಗೆ, ರಾಜ್ಯದ 8,400 ನೋಂದಾಯಿತ ವ್ಯಾಪಾರ ಮಂಡಲಗಳು ಮತ್ತು ಪಿಎಸಿಎಸ್‌ಗಳ ವ್ಯವಸ್ಥಾಪಕರು ಗೌರವಧನವನ್ನು ಪಡೆಯುತ್ತಾರೆ ಎಂದರು.
ಬಿಹಾರದ 243 ಸದಸ್ಯ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶಗಳು ಪ್ರಕಟವಾಗಲಿವೆ.
Advertisement