

ಪಾಟ್ನಾ/ಸಾಹೇಬ್‌ಗಂಜ್/ಹಾಜಿಪುರ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮುಸ್ಲಿಂ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಇದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪರಿಣಾಮ ಎಂದು ರಾಜಕೀಯ ವಿಶ್ಲೇಷಕರು (observers) ಹೇಳುತ್ತಿದ್ದಾರೆ.
ವಿಶೇಷವಾಗಿ ಮುಸ್ಲಿಂ ಸಮುದಾಯದ ಅನೇಕ ಮಹಿಳೆಯರು, ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳಲು ಮತ್ತು ತಮ್ಮ ಮತಗಳನ್ನು ಚಲಾಯಿಸಲು ಇತರ ರಾಜ್ಯಗಳಿಂದ ಬಿಹಾರಕ್ಕೆ ಮರಳಿದ್ದಾರೆ.
ರಾಜ್ಯದಿಂದ ದೀರ್ಘಕಾಲದವರೆಗೆ ಗೈರುಹಾಜರಾಗುವುದರಿಂದ ಅವರ ಹೆಸರುಗಳು ಮತದಾರರ ಪಟ್ಟಿಯಿಂದ ಡಿಲೀಟ್ ಆಗುತ್ತದೆ ಅಥವಾ ಬೇರೆಡೆ ನಕಲು ಮಾಡಲ್ಪಡುತ್ತವೆ ಎಂಬ ಭಯ ಅವರಲ್ಲಿ ಕಳವಳಕ್ಕೆ ಕಾರಣವಾಗಿದೆ.
ಹಲವಾರು ಮತದಾರರು ತಮ್ಮ ಹೆಸರುಗಳನ್ನು ಇತರ ರಾಜ್ಯಗಳಲ್ಲಿನ ಪಟ್ಟಿಯಿಂದ ವರ್ಗಾಯಿಸಲು ಅರ್ಜಿ ಸಲ್ಲಿಸಿದ್ದಾರೆ ಅಥವಾ ಬಿಹಾರದಲ್ಲಿ ನೋಂದಾಯಿಸಿಕೊಳ್ಳಲು ಅಲ್ಲಿ ಡಿಲೀಟ್ ಮಾಡಲು ಕೋರಿರುವುದಾಗಿ ಅವರು ತಿಳಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಆದ ಮತದಾನದ ಹೆಚ್ಚಳ ಮತದಾರರ ಜಾಗೃತಿ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ ಎಂದು ಪಾಟ್ನಾದ ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.
45 ವರ್ಷದ ಸಬೀನಾ ಖಾಟೂನ್, ತಮ್ಮ ಅತ್ತೆ ರುಬಿಯಾ (57) ಮತ್ತು ಮಗಳು ಬೇಬಿ (20) ಅವರೊಂದಿಗೆ ಪಾಟ್ನಾದಲ್ಲಿ ಮತ ಚಲಾಯಿಸಲು ಮಹಾರಾಷ್ಟ್ರದ ನಾಸಿಕ್‌ನಿಂದ ಬಂದಿದ್ದರು. "ನಮ್ಮ ಹೆಸರುಗಳು ಡಿಲೀಟ್ ಆಗದಂತೆ ನೋಡಿಕೊಳ್ಳಲು SIR ನಮಗೆ ಮನವರಿಕೆ ಮಾಡಿಕೊಟ್ಟಿತು. ನಮ್ಮ ಮೊಹಲ್ಲಾ, ಫುಲ್ವಾರಿಷರೀಫ್‌ನಲ್ಲಿ, ಗುಜರಾತ್, ಕೋಲ್ಕತ್ತಾ ಮತ್ತು ಮುಂಬೈನಿಂದ ಬಂದ ಎರಡು ಡಜನ್‌ಗಿಂತಲೂ ಹೆಚ್ಚು ಮುಸ್ಲಿಂ ಮಹಿಳೆಯರು ಕೇವಲ ಮತ ಚಲಾಯಿಸಲು ಮರಳಿದ್ದಾರೆ. ಯಾವುದೇ ಭಾರತೀಯರು ಚುನಾವಣೆಯಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅವರು ಹೇಳಿದರು.
2020 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಗಮನಾರ್ಹವಾಗಿ ಹೆಚ್ಚಿನ ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮುಜಫರ್‌ಪುರದ ಸಾಹೇಬ್‌ಗಂಜ್‌ನ ಸಾಮಾಜಿಕ ಕಾರ್ಯಕರ್ತ ಎಂಡಿ ನಕೀಬ್ ಅವರ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಮತದಾನ ಮಾಡಿದ್ದಾರೆ. ಅಲ್ಲಿ SIR ಮೂಲಕ ಅಲ್ಪಸಂಖ್ಯಾತ ಮತ್ತಿತರ ಸಮುದಾಯಗಳ ಮಹಿಳೆಯರು ಮತದಾನದ ಬಗ್ಗೆ ಮಾತ್ರವಲ್ಲದೆ ತಮ್ಮ ಮಕ್ಕಳಿಗೆ ಜನನ ಪ್ರಮಾಣಪತ್ರಗಳಂತಹ ಅಗತ್ಯ ದಾಖಲೆಗಳನ್ನು ಪಡೆಯುವ ಬಗ್ಗೆಯೂ ಹೆಚ್ಚು ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
Advertisement