

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹರಿಯಾಣದಲ್ಲಿ ಭಾರೀ ಪ್ರಮಾಣದಲ್ಲಿ ಮತಗಳ್ಳತನ ನಡೆದಿರುವ ಆರೋಪ ಮಾಡಿ, ಉಲ್ಲೇಖಿಸಿದ್ದ ಬ್ರೆಜಿಲಿಯನ್ ಮಾಡೆಲ್ ಒಬ್ಬರ ಫೋಟೋ ಇದೀಗ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಮಾಡೆಲ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಉಲ್ಲೇಖಿಸಿರುವ ಬ್ರೆಜಿಲಿಯನ್ ಮಾಡೆಲ್ ಲಾರಿಸ್ಸಾ ಬೊನೆಸಿ, ನಮಸ್ಕಾರ ಭಾರತ, ಭಾರತೀಯ ಪತ್ರಕರ್ತರಿಗಾಗಿ ಒಂದು ವಿಡಿಯೋ ಮಾಡಲು ನನ್ನನ್ನು ಕೇಳಲಾಯಿತು. ಅದಕ್ಕಾಗಿಯೇ ನಾನು ಈ ವಿಡಿಯೋ ಮಾಡುತ್ತಿದ್ದೇನೆ.
ನನಗೆ ಭಾರತೀಯ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ. ನಾನು ಭಾರತಕ್ಕೆ ಎಂದಿಗೂ ಹೋಗಿಲ್ಲ. ನಾನು ಬ್ರೆಜಿಲಿಯನ್ ಮಾಡೆಲ್ ಆಗಿದ್ದೆ ಮತ್ತು ನಾನು ಡಿಜಿಟಲ್ ಪ್ರಭಾವಿಯೂ ಆಗಿದ್ದೇನೆ. ನಾನು ಭಾರತದ ಜನರನ್ನು ಪ್ರೀತಿಸುತ್ತೇನೆ. ತುಂಬಾ ಧನ್ಯವಾದಗಳು, ನಮಸ್ತೆ ಎಂದು ಹೇಳಿದ್ದಾರೆ.
ಸ್ನೇಹಿತರೇ, ನಾನು ನಿಮಗೆ ಒಂದು ತಮಾಷೆ ಹೇಳಲಿದ್ದೇನೆ. ಅವರು (ರಾಹುಲ್ ಗಾಂಧಿ) ನನ್ನ ಹಳೆಯ ಚಿತ್ರವನ್ನು ಬಳಸುತ್ತಿದ್ದಾರೆ. ಆ ಫೋಟೋ ತೆಗೆದಾಗ ನನಗೆ ಸುಮಾರು 18-20 ವರ್ಷ ವಯಸ್ಸಾಗಿರಬೇಕು... ಇದು ಚುನಾವಣೆಯೋ, ಭಾರತದಲ್ಲಿ ಮತದಾನದ ಬಗ್ಗೆಯೋ ನನಗೆ ತಿಳಿದಿಲ್ಲ. ಭಾರತದಲ್ಲಿ ಜನರನ್ನು ವಂಚಿಸಲು ನನ್ನನ್ನು ಭಾರತೀಯ ಎಂದು ಚಿತ್ರಿಸುತ್ತಿದ್ದಾರೆ, ಇದು ಎಂತಹ ಹುಚ್ಚುತನ, ಇದು ಯಾವ ರೀತಿಯ ಹುಚ್ಚುತನ? ನಾವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ? ಎಂದು ಪ್ರಶ್ನಿಸಿದ್ದಾರೆ.
ಕೆಲ ವ್ಯಕ್ತಿಗಳು ನಾನು ಕೆಲಸದಲ್ಲಿದ್ದ ಸ್ಥಳಕ್ಕೆ ಕರೆ ಮಾಡಿದ್ದರು. ಸಂದರ್ಶನಕ್ಕಾಗಿ ನನ್ನೊಂದಿಗೆ ಮಾತನಾಡಲು ಬಯಸಿದ್ದರು. ನಾನು ಅದಕ್ಕೆ ಉತ್ತರಿಸಲಿಲ್ಲ. ಬಳಿಕ ನನ್ನ ಇನ್‌ಸ್ಟಾಗ್ರಾಮ್ ಖಾತೆ ಪತ್ತೆ ಮಾಡಿ, ಅಲ್ಲಿಯೂ ಸಂಪರ್ಕಿಸಲು ಯತ್ನಿಸಿದರು. ಇದೀಗ ಬೇರೆ ನಗರದಲ್ಲಿರುವ ನನ್ನ ಸ್ನೇಹಿತ ನನಗೆ ಪೋಟೋ ಕಳುಹಿಸಿದ್ದರು. ಹೀಗಾಗಿ ನಾನು ವಿಡಿಯೋ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆಂದು ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ಹರಿಯಾಣ ಚುನಾವಣೆಯ ಸಮಯದಲ್ಲಿ 25 ಲಕ್ಷ ನಕಲಿ ಮತದಾರರಿದ್ದಾರೆ. ಬ್ರೆಜಿಲ್ ಮಹಿಳೆಯ ಫೋಟೊ ಬಳಸಿ 22 ಕಡೆ ಮತ ಚಲಾಯಿಸಲಾಗಿದೆ ಎಂದು ಆರೋಪಿಸಿದ್ದರು.
Advertisement