

ಮುಂಬೈ: ಪುಣೆ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಶುಕ್ರವಾರ ಭಾಗಿಯಾದವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಗಮನಾರ್ಹ ಬೆಳವಣಿಗೆ ಎಂದರೆ ವಿವಾದಾತ್ಮಕ ಭೂಮಿಯ ಶೇ. 99 ರಷ್ಟು ಮಾಲೀಕರಾಗಿರುವ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪುತ್ರ ಪಾರ್ಥ್ ಪವಾರ್ ಅವರನ್ನು ಹೊರಗಿಡಲಾಗಿದೆ.
ಪಾರ್ಥ್ ಪವಾರ್ ಮತ್ತು ಅವರ ಸಂಬಂಧಿ ದಿಗ್ವಿಜಯ್‌ಸಿನ್ಹ್ ಪಾಟೀಲ್ ಅವರು 40 ಎಕರೆ ಭೂಮಿಯನ್ನು 300 ಕೋಟಿ ರೂ.ಗೆ ಖರೀದಿಸಿದ್ದರು. ಆದರೆ ಇದರ ಮಾರುಕಟ್ಟೆ ಮೌಲ್ಯ 1,800 ಕೋಟಿ ರೂ.ಗಳಾಗಿದ್ದು, ಮೂಲತಃ ಮಹಾರ್ ವತನ್ ಎಂದು ಕರೆಯಲ್ಪಡುವ ಈ ಭೂಮಿ ದಲಿತ ಭೂರಹಿತ ರೈತರಿಗಾಗಿ ಮೀಸಲಾಗಿತ್ತು.
ರಾಜ್ಯ ಕಂದಾಯ ಇಲಾಖೆಯ ನಿರ್ದೇಶನದ ಮೇರೆಗೆ, ಪೊಲೀಸರು ಪುಣೆಯ ಭೂ ಒಪ್ಪಂದದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಎಫ್ಐಆರ್ ನಲ್ಲಿ ಪಾರ್ಥ್ ಪವಾರ್ ಅವರ ಹೆಸರನ್ನು ಸೇರಿಸಲಾಗಿಲ್ಲ. ಅಚ್ಚರಿ ಎಂದರೆ ಭೂಮಿ ಖರೀದಿಸಿದ ಅಮೇಡಿಯಾ ಕಂಪನಿಯಲ್ಲಿ ಕೇವಲ ಶೇ. 1 ರಷ್ಟು ಮಾಲೀಕತ್ವ ಹೊಂದಿರುವ ದಿಗ್ವಿಜಯ್‌ಸಿನ್ಹ್ ಪಾಟೀಲ್ ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಜಿತ್ ಪವಾರ್ ಮತ್ತು ಅವರ ಪುತ್ರನನ್ನು ಸಮರ್ಥಿಸಿಕೊಳ್ಳುತ್ತಿರುವುದನ್ನು ನೋಡಿದರೆ ಸರ್ಕಾರವು ಸರಿಯಾದ ತನಿಖೆ ನಡೆಸುವುದಕ್ಕಿಂತ ಹಗರಣವನ್ನು ಮುಚ್ಚಿಹಾಕುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದೆ ಎಂಬುದನ್ನು ಸೂಚಿಸುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಪುಣೆ ಭೂ ವ್ಯವಹಾರದ ಸಮಯದಲ್ಲಿ ದಾಖಲೆಗಳಲ್ಲಿ ಹೆಸರು ಕಾಣಿಸಿಕೊಂಡವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಅವರು ಹೇಳಿದ್ದಾರೆ. ನೋಂದಣಿ ಸಮಯದಲ್ಲಿ ಪಾರ್ಥ್ ಪವಾರ್ ಅವರ ಹೆಸರು ಕಾಣಿಸಿಕೊಂಡಿಲ್ಲದ ಕಾರಣ, ಅವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸಲಾಗಿಲ್ಲ. "ತನಿಖೆಯ ಸಮಯದಲ್ಲಿ ಪಾರ್ಥ್ ಪವಾರ್ ಅವರ ಹೆಸರು ಹೊರಬಂದರೆ, ಅದನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗುತ್ತದೆ" ಎಂದು ಸಚಿವರು ತಿಳಿಸಿದ್ದಾರೆ.
ಸರ್ಕಾರ ಮತ್ತು ಪೊಲೀಸರು ಮುಖ್ಯ ಮಾಲೀಕ ಪಾರ್ಥ್ ಪವಾರ್ ವಿರುದ್ಧ ಎಫ್‌ಐಆರ್ ದಾಖಲಿಸದಿರುವುದು ಆಶ್ಚರ್ಯಕರ. ಆದರೆ ಕೇವಲ ಒಂದು ಶೇಕಡಾ ಮಾಲೀಕತ್ವವನ್ನು ಹೊಂದಿರುವ ದಿಗ್ವಿಜಯಸಿನ್ಹ್ ಪಾಟೀಲ್ ಅವರನ್ನು ಹೆಸರಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಕಿಡಿ ಕಾರಿದ್ದಾರೆ.
'ಭೂ ಒಪ್ಪಂದ ರದ್ದು'
ಏತನ್ಮಧ್ಯೆ, ರಾಜೀನಾಮೆ ನೀಡುವಂತೆ ಒತ್ತಡ ಬಂದ ನಂತರ, ಅಜಿತ್ ಪವಾರ್ ಅವರು ವಿವಾದಾತ್ಮಕ ಪುಣೆ ಭೂ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ ಮತ್ತು ಅದಕ್ಕಾಗಿ ದಾಖಲೆಗಳನ್ನು ಸಹ ಸಲ್ಲಿಸಿದ್ದಾರೆ.
ಪುಣೆ ಭೂ ಒಪ್ಪಂದವನ್ನು ರದ್ದುಗೊಳಿಸುವ ಉದ್ದೇಶವನ್ನು ಪಾರ್ಥ್ ಪವಾರ್ ಕಂದಾಯ ಇಲಾಖೆಗೆ ತಿಳಿಸಿದ್ದಾರೆ. ಮಾರಾಟ ಪತ್ರ ರದ್ದುಗೊಳಿಸಲು ಅಗತ್ಯವಾದ ದಾಖಲೆಯನ್ನು ಈಗಾಗಲೇ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement