

ನವದೆಹಲಿ: ಶೈಕ್ಷಣಿಕ ಕೇಂದ್ರಗಳು ಮತ್ತು ಆಸ್ಪತ್ರೆಗಳಂತಹ ಸಾಂಸ್ಥಿಕ ಪ್ರದೇಶಗಳಲ್ಲಿ ನಾಯಿ ಕಡಿತ ಪ್ರಕರಣಗಳು 'ಆತಂಕಕಾರಿ' ರೀತಿಯಲ್ಲಿ ಏರಿಕೆಯಾಗುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಶುಕ್ರವಾರ ಅಂತಹ ನಾಯಿಗಳನ್ನು ಗೊತ್ತುಪಡಿಸಿದ ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕು ಎಂದು ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ವಿಶೇಷ ಪೀಠವು, ಬೀದಿ ನಾಯಿಗಳ ಕಡಿತ ಪ್ರಕರಣದಲ್ಲಿ ಹಲವಾರು ನಿರ್ದೇಶನಗಳನ್ನು ನೀಡಿದೆ. ಜತೆಗೆ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿನ ದನಗಳು ಮತ್ತು ಇತರ ಪ್ರಾಣಿಗಳನ್ನು ತೆರವುಗೊಳಿಸುವುದು ಮತ್ತು ಅವುಗಳನ್ನು ನಿಗದಿತ ಆಶ್ರಯತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.
ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಆವರಣಕ್ಕೆ ಬೀದಿ ನಾಯಿಗಳು ಪ್ರವೇಶಿಸುವುದನ್ನು ತಡೆಯುವ ಮೂಲಕ ನಾಯಿ ಕಡಿತದ ಘಟನೆಗಳನ್ನು ತಡೆಗಟ್ಟಬೇಕು. ಅಲ್ಲದೆ, ಅಲ್ಲಿಂದ ಹಿಡಿದು ತಂದ ಬೀದಿ ನಾಯಿಗಳನ್ನು ಮತ್ತೆ ಅದೇ ಸ್ಥಳಕ್ಕೆ ಬಿಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿತು.
ಬಿಡಾಡಿ ಪ್ರಾಣಿಗಳು ಹೆಚ್ಚಾಗಿ ಕಂಡುಬರುವ ಹೆದ್ದಾರಿಗಳಲ್ಲಿ ಪ್ರದೇಶಗಳು ಎಲ್ಲೆಲ್ಲಿವೆ ಎಂಬುದನ್ನು ಗುರುತಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸೇರಿದಂತೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳುವಂತೆಯೂ ಪೀಠ ಸೂಚಿಸಿತು. ಮುಂದಿನ ವಿಚಾರಣೆಯನ್ನು ಜನವರಿ 13ಕ್ಕೆ ನಿಗದಿಪಡಿಸಿತು.
ಕೆಲವು ಸಂಸ್ಥೆಗಳಲ್ಲಿರುವ ಬೀದಿ ನಾಯಿಗಳಿಗೆ ಅಲ್ಲಿನ ನೌಕರರೇ ಆಹಾರ ನೀಡುತ್ತಿರುವುದರಿಂದ ಮತ್ತು ಪ್ರೋತ್ಸಾಹಿಸುತ್ತಿರುವುದರಿಂದ ಉಂಟಾಗುವ ನಾಯಿ ಕಡಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಂಭೀರ ಅಪಾಯವನ್ನು ತಪ್ಪಿಸಲು ಮಧ್ಯಂತರ ನಿರ್ದೇಶನ ನೀಡುವುದಾಗಿ ನವೆಂಬರ್ 3 ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ನಾಯಿ ಕಡಿತದಿಂದಾಗಿ ವಿಶೇಷವಾಗಿ ಮಕ್ಕಳಲ್ಲಿ ರೇಬೀಸ್‌ಗೆ ಕಾರಣವಾಗುತ್ತಿದೆ ಎಂಬ ಮಾಧ್ಯಮಗಳ ವರದಿ ಮೇರೆಗೆ ಜುಲೈ 28 ರಂದು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ವಿಚಾರಣೆ ನಡೆಸುತ್ತಿದೆ.
Advertisement