

ಅಹ್ಮದಾಬಾದ್: ಕಣ್ಣಿಗೆ ಖಾರದ ಪುಡಿ ಎರಚಿ ಕಳ್ಳತನಕ್ಕೆ ಯತ್ನಿಸಿದ ಮಹಿಳೆಗೆ ಚಿನ್ನದಂಗಡಿ ಮಾಲೀಕ ಕೇವಲ 20 ಸೆಕೆಂಡ್ ನಲ್ಲಿ 18 ಬಾರಿ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಗುಜರಾತ್‌ನ ಅಹ್ಮದಾಬಾದ್‌ನ ರಾಣಿಪ್ ಪ್ರದೇಶದ ನಕ್ದಂಡ್ ಆಭರಣ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಆಭರಣ ಖರೀದಿ ನೆಪದಲ್ಲಿ ಅಂಗಡಿ ಪ್ರವೇಶ ಮಾಡಿದ್ದ ಮುಸುಕುದಾರಿ ಮಹಿಳೆ ಅಂಗಡಿ ಮಾಲೀಕನನ್ನು ಮಾತಿನಲ್ಲಿ ಸಿಲುಕಿಸಿ ಬಳಿಕ ನೋಡ ನೋಡುತ್ತಲೇ ಆತನ ಕಣ್ಣಿಗೆ ಖಾರದ ಪುಡಿ ಎರಚಿ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಈ ವೇಳೆ ಮಹಿಳೆಯ ಖತರ್ನಾಕ್ ಸಂಚು ಅರಿತ ಅಂಗಡಿ ಮಾಲೀಕ ಕೂಡಲೇ ಆಕೆಗೆ ಕಪಾಳ ಮೋಕ್ಷ ಮಾಡಿದ್ದಾನೆ.
20 ಸೆಕೆಂಡ್ ನಲ್ಲಿ 18 ಬಾರಿ ಥಳಿತ
ಈ ವೇಳೆ ಮಹಿಳೆಯ ದರೋಡೆ ಯತ್ನವನ್ನು ವಿಫಲಗೊಳಿಸಿದ ಅಂಗಡಿ ಮಾಲೀಕ ಕೇವಲ 20 ಸೆಕೆಂಡ್ ನಲ್ಲಿ 18 ಬಾರಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಮಹಿಳೆ ಪರಾರಿಗೆ ಯತ್ನಿಸಿದ್ದು ಮಾಲೀಕ ಕೂಡ ಆಕೆಯನ್ನು ಹಿಂಬಾಲಿಸಿ ಹಿಡಿಯಲು ಯತ್ನಿದ್ದಾನೆ. ಆದರೆ ಮಹಿಳೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಂಗಡಿ ಮಾಲೀಕನ ಚಾಣಾಕ್ಷತನ ಮತ್ತು ಧೈರ್ಯವನ್ನು ಶ್ಲಾಘಿಸಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ರಾನಿಪ್ ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಮಹಿಳೆಗಾಗಿ ಶೋಧ ನಡೆಸುತ್ತಿರುವ ಪೊಲೀಸರು ಇದು ಯಾವುದೋ ಓರ್ವ ಮಹಿಳೆಯ ಕೃತ್ಯವಲ್ಲ. ಒಂದು ಗ್ಯಾಂಗ್ ನ ಸಂಚಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಮಹಿಳೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ರಾಣಿಪ್ ಪೊಲೀಸ್ ಠಾಣೆಯ ಪಿಐ ಕೇತನ್ ವ್ಯಾಸ್ ಹೇಳಿದ್ದಾರೆ. ಆಭರಣ ವ್ಯಾಪಾರಿ ದೂರು ದಾಖಲಿಸಲು ನಿರಾಕರಿಸುತ್ತಿದ್ದರೂ, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಹಿಳೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ.
Advertisement