ಬಿಹಾರದ ಇತಿಹಾಸದಲ್ಲೇ ಶೇ. 65.08 ರಷ್ಟು 'ಐತಿಹಾಸಿಕ' ಮತದಾನ: ಚುನಾವಣಾ ಆಯೋಗ ಮಾಹಿತಿ
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಶೇ.65.08 ರಷ್ಟು "ಐತಿಹಾಸಿಕ" ಮತದಾನ ದಾಖಲಾಗಿದ್ದು, ಇದು ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿ ಒದಗಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, 2020 ರ ವಿಧಾನಸಭಾ ಚುನಾವಣೆಯ ಒಟ್ಟು ಮತದಾನದ ಶೇಕಡಾವಾರು ಪ್ರಮಾಣಕ್ಕಿಂತ ಶೇ.7.79 ರಷ್ಟು ಹೆಚ್ಚಿನ ಮತದಾನವಾಗಿದೆ, 2020ರಲ್ಲಿ ಶೇ.57.29 ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದರು.
ಚುನಾವಣಾ ಆಯೋಗದ ಪ್ರಕಾರ "ಮುಜಾಪ್ಪುರ ಮತ್ತು ಸಮಸ್ತಿಪುರ" ಎಂಬ ಎರಡು ಜಿಲ್ಲೆಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಮತದಾನವಾಗಿದೆ. ಮುಜಾಪ್ಪುರದಲ್ಲಿ ಶೇ.71.81 ರಷ್ಟು ಮತದಾನವಾಗಿದ್ದರೆ, ಸಮಸ್ತಿಪುರದಲ್ಲಿ ಶೇ.71.74 ರಷ್ಟು ಮತದಾನವಾಗಿದೆ.
ನವೆಂಬರ್ 6 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ 36,733 ಸೇರಿದಂತೆ 45,341 ಮತಗಟ್ಟೆಗಳಲ್ಲಿ ಒಟ್ಟು 3.75 ಕೋಟಿ ಜನರು ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದರು, 1,314 ಅಭ್ಯರ್ಥಿಗಳಲ್ಲಿ 1,192 ಪುರುಷರು ಮತ್ತು 122 ಮಹಿಳೆಯರು ಸೇರಿದ್ದಾರೆ. 3.75 ಕೋಟಿ ಮತದಾರರಲ್ಲಿ, 1.98 ಕೋಟಿ ಪುರುಷರು ಮತ್ತು 1.76 ಕೋಟಿ ಮಹಿಳೆಯರು ಸೇರಿದ್ದಾರೆ.
ನವೆಂಬರ್ 6 ರಂದು ನಡೆದ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮತದಾನ ಮಾಡಿದ್ದಾರೆ. ಮಾಧೇಪುರ (69.59), ಸಹರ್ಸಾ (69.38), ವೈಶಾಲಿ (68.50) ಮತ್ತು ಖಗಾರಿಯಾ (67.90) ಜಿಲ್ಲೆಗಳಲ್ಲಿ ಹೆಚ್ಚಿನ ಮತದಾನದ ಶೇಕಡಾವಾರು ದಾಖಲಿಸಿವೆ.
ಪಾಟ್ನಾ ಜಿಲ್ಲೆಯಲ್ಲಿ ಶೇ. 59.02 ರಷ್ಟು ಮತದಾನ ದಾಖಲಾಗಿದ್ದರೆ, ಲಖಿಸರೈ ಶೇ. 64.98, ಮುಂಗರ್ 62.74 ಮತ್ತು ಸಿವಾನ್ 60.61 ರಷ್ಟು ಮತದಾನ ದಾಖಲಾಗಿದೆ. 243 ಸದಸ್ಯ ಬಲದ ವಿಧಾನಸಭೆಯ ಉಳಿದ 122 ಸ್ಥಾನಗಳಿಗೆ ನವೆಂಬರ್ 11 ರಂದು ಚುನಾವಣೆ ನಡೆಯಲಿದ್ದು, ಎಣಿಕೆ ನವೆಂಬರ್ 14 ರಂದು ನಡೆಯಲಿದೆ.


