

ನವದೆಹಲಿ: ಇಂದು ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರವಾಗಲು ಒಂದರ್ಥದಲ್ಲಿ ಭಾರತವೇ ಕಾರಣವಾಗಿದ್ದು, ಅಂದಿನ ಪ್ರಧಾನಿ ಇಂದಿರಾಗಾಂಧಿ (Indira Gandhi) ಪಾಕ್ ಪರಮಾಣು ಸ್ಥಾವರ ಮೇಲೆ ದಾಳಿ ಮಾಡಲು ಹಿಂದೇಟು ಹಾಕಿದ್ದರು ಎಂದು ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ (richard barlow) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಎಎನ್ಐ ಸುದ್ದಿಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ರಿಚರ್ಡ್ ಬಾರ್ಲೋ, ತಮ್ಮ ವೃತ್ತಿ ಜೀವನದ ಹಲವು ಪ್ರಮುಖ ಘಟನೆಗಳನ್ನು ಮೆಲುಕು ಹಾಕಿಕೊಂಡಿದ್ದು, ಪ್ರಮುಖವಾಗಿ ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರವಾಗಲು ಭಾರತವೇ ಕಾರಣ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಪಾಕಿಸ್ತಾನದ ಪರಮಾಣು ಯೋಜನೆಗಳನ್ನು ತಡೆಯುವ ಅವಕಾಶಗಳನ್ನು ಭಾರತ ಹೇಗೆ ಕೈಚೆಲ್ಲಿತ್ತು ಎಂಬುದನ್ನು ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ ಬಿಚ್ಚಿಟ್ಟಿದ್ದು, '1980ರ ದಶಕದಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವು, ಪಾಕಿಸ್ತಾನದ ಕಹುತಾ ಪರಮಾಣು ಸೌಲಭ್ಯದ ಮೇಲೆ ದಾಳಿ ಮಾಡಲು ನಿರಾಕರಿಸಿತ್ತು' ಎಂಬ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಅಪರೂಪದ ಅವಕಾಶ ಕೈಚೆಲ್ಲಿದ ಇಂದಿರಾ ಗಾಂಧಿ ಸರ್ಕಾರ
1980ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಕಹುತಾ ಪರಮಾಣು ಸೌಲಭ್ಯದ ಮೇಲೆ ಬಾಂಬ್ ದಾಳಿ ಮಾಡಲು, ಭಾರತ ಮತ್ತು ಇಸ್ರೇಲ್ ಹಮ್ಮಿಕೊಂಡಿದ್ದ ಉದ್ದೇಶಿತ ಜಂಟಿ ರಹಸ್ಯ ಕಾರ್ಯಾಚರಣೆಯು, ಇಸ್ಲಾಮಾಬಾದ್‌ನ ಪರಮಾಣು ಮಹತ್ವಾಕಾಂಕ್ಷೆಯ ಸಮಸ್ಯೆಗಳನ್ನು ತಡೆಯಬಹುದಿತ್ತು. ಆದರೆ ಇಂದಿರಾ ಗಾಂಧಿ ಸರ್ಕಾರ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಪಾಕಿಸ್ತಾನದ ಕಹುತಾ ಪರಮಾಣು ಸೌಲಭ್ಯದ ಮೇಲೆ ದಾಳಿ ಮಾಡಲು ಹಿಂದೇಟು ಹಾಕಿದರು ಎಂದು ರಿಚರ್ಡ್ ಬಾರ್ಲೋ ಹೇಳಿದ್ದಾರೆ.
ದೊಡ್ಡ ಅವಮಾನ
ಇದೇ ವೇಳೆ ಇಂದಿರಾ ಗಾಂಧಿ ಸರ್ಕಾರ ಕಾರ್ಯಾಚರಣೆಗೆ ನಿರಾಕರಿಸಿದ್ದನ್ನು "ಅವಮಾನ" ಎಂದು ಕರೆದಿರುವ ರಿಚರ್ಡ್ ಬಾರ್ಲೋ, ಆಗ ಬಾಂಬ್ ದಾಳಿಗೆ ಮುಂದಾಗಿದ್ದರೆ, ಇಂದು ಭಾರತವು ಪಾಕಿಸ್ತಾನದ ಪರಮಾಣು ಯೋಜನೆಗಳಿಗೆ ಆತಂಕಪಡಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ 'ಪಾಕಿಸ್ತಾನದ ಪರಮಾಣು ಸೌಲಭ್ಯದ ಮೇಲೆ ದಾಳಿ ನಡೆಸುವ ಕುರಿತು ಗುಪ್ತಚರ ವಲಯಗಳಲ್ಲಿ ನಡೆದ ಚರ್ಚೆಯನ್ನು ನಾನು ಕೇಳಿದ್ದೇನೆ. ಆದರೆ ಆ ಅವಧಿಯಲ್ಲಿ ನಾನು ಸರ್ಕಾರಿ ಸೇವೆಯಿಂದ ಹೊರಗಿದ್ದರಿಂದ, ಈ ಚರ್ಚೆಗಳಲ್ಲಿ ನೇರವಾಗಿ ಭಾಗಿಯಾಗಿಲ್ಲ' ಎಂದು ರಿಚರ್ಡ್ ಬಾರ್ಲೋ ಸ್ಪಷ್ಟಪಡಿಸಿದ್ದಾರೆ.
ನಾನು 1982 ರಿಂದ 1985ರವರೆಗೆ ಸರ್ಕಾರದಿಂದ ಹೊರಗಿದ್ದೆ. ಆದರೆ ಭಾರತ-ಇಸ್ರೇಲ್ ಜಂಟಿ ಕಾರ್ಯಾಚರಣೆಯ ಸಾಧ್ಯತೆ ಬಗ್ಗೆ ಯಾವುದೋ ಹಂತದಲ್ಲಿ ನನಗೆ ಮಾಹಿತಿ ಬಂದಿತ್ತು. ಆದರೆ ಅದು ಎಂದಿಗೂ ಸಂಭವಿಸದ ಕಾರಣ, ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಇಂದಿರಾ ಗಾಂಧಿ ಈ ಜಂಟಿ ಕಾರ್ಯಾಚರಣೆಯ್ನನು ಅನುಮೋದಿಸದಿರುವುದು ನಾಚಿಕೆಗೇಡಿನ ಸಂಗತಿ. ಒಂದು ವೇಳೆ ಭಾರತ ಬಾಂಬ್ ದಾಳಿ ನಡೆಸಿದ್ದರೆ. ಅದು ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸುತ್ತಿತ್ತು ಎಂದು ಹೇಳಿದ್ದಾರೆ.
ದಾಳಿಗೆ ತುದಿಗಾಲಲ್ಲಿ ನಿಂತಿದ್ದ ಇಸ್ರೇಲ್
ಇದೇ ವೇಳೆ ಇಸ್ಲಾಮಾಬಾದ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರಸರಣ ಮಾಡುವುದನ್ನು ತಡೆಯಲು, ಇಸ್ರೇಲ್ ಗಂಭೀರವಾಗಿ ಪ್ರಯತ್ನಿಸುತ್ತಿತ್ತು. ಏಕಂದರೆ ಈ ಪರಮಾಣು ಜ್ಞಾನ ಇರಾನ್‌ಗೆ ದೊರೆಯುವ ಆತಂಕ ಇಸ್ರೇಲ್‌ಗೆ ಕಾಡುತ್ತಿತ್ತು. ಹೀಗಾಗಿ ಇಸ್ರೇಲ್ ಪಾಕಿಸ್ತಾನದ ಕಹುತಾ ಯುರೇನಿಯಂ ಪುಷ್ಟೀಕರಣ ಸ್ಥಾವರದ ಮೇಲೆ ವಾಯುದಾಳಿ ಮಾಡಲು ಯೋಜನೆ ರೂಪಿಸಿತ್ತು.
ಈ ವಿಚಾರವಾಗಿ ಆಗಿನ ಇಸ್ರೇಲ್ ಸರ್ಕಾರ ಭಾರತ ಸರ್ಕಾರವನ್ನು ಸಂಪರ್ಕಿಸಿತ್ತಾದರೂ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ, ಈ ಸೇನಾ ಕಾರ್ಯಾಚರಣೆಗೆ ಅನುಮೋದನೆ ನೀಡಿರಲಿಲ್ಲ. ಅಷ್ಟೇ ಅಲ್ಲದೇ ಅಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧದ ಹೋರಾಟಕ್ಕೆ ಹಿನ್ನೆಡೆಯಾಗುವ ಭಯದಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ನೇತೃತ್ವದ ಅಮೆರಿಕ ಸರ್ಕಾರ ಕೂಡ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು ಎಂದು ರಿಚರ್ಡ್ ಬಾರ್ಲೋ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ 1980ರ ದಶಕದಲ್ಲಿ ಪಾಕಿಸ್ತಾನದ ರಹಸ್ಯ ಪರಮಾಣು ಚಟುವಟಿಕೆಗಳ ಮೇಲೆ, ಅಮೆರಿಕದ ಗುಪ್ತಚರ ಸಂಸ್ಥೆಯ ಪ್ರತಿ-ಪ್ರಸರಣ ಅಧಿಕಾರಿಯಾಗಿ ರಿಚರ್ಡ್ ಬಾರ್ಲೋ ಕರ್ತವ್ಯ ನಿರ್ವಹಿಸಿದ್ದರು.
ಇತ್ತೀಚಿಗಷ್ಟೇ ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ ಅವರು, "ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಆಡಳಿತಾವಧಿಯಲ್ಲಿ, "ಅಮೆರಿಕದಿಂದ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರ ನಿಯಂತ್ರಣ ನಡೆಯುತ್ತಿತ್ತು" ಎಂದು ಸ್ಪೋಟಕ ಹೇಳಿಕೆ ನೀಡಿದ್ದರು.
Advertisement