

ನವದೆಹಲಿ: ಭಾರತೀಯ ಸೇನೆಯ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ ಎಂದು ಎಚ್ಚರಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ʻಶೇ. 10 ಇರುವ ಜನರು ಸೇನೆಯನ್ನ ನಿಯಂತ್ರಿಸುತ್ತಿದ್ದಾರೆʼ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದರು. ಇದು ರಾಹುಲ್ ಗಾಂಧಿ ಅವರ ಬೇಜವಾಬ್ದಾರಿ ತನದ ಹೇಳಿಕೆ. ಜಾತಿ ರಾಜಕೀಯಕ್ಕೆ ಸೇನೆಯನ್ನು ಎಳೆದು ತರುತ್ತಿರುವುದು ವಿಭಜಿಸುವ ರಾಜಕೀಯ ಕುತಂತ್ರ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅಭಿವೃದ್ಧಿ ಮೂಲಕ ಮತ್ತು ತಮ್ಮ ಕೆಲಸಗಳ ಮೂಲಕ ಸಾರ್ವಜನಿಕರ ನಂಬಿಕೆಯನ್ನು ಗಳಿಸಲು ಸಾಧ್ಯವಿಲ್ಲ. ಅದಕ್ಕಾಗಿ ಜನರ ದಾರಿ ತಪ್ಪಿಸುವ, ಆಧಾರ ರಹಿತ ಹೇಳಿಕೆಗಳನ್ನ ನೀಡುವುದು ಅಭ್ಯಾಸ ಆಗಿಬಿಟ್ಟಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಆದ್ರೆ ಆರೋಗ್ಯಕರ ರಾಜಕೀಯ ಎಂದಿಗೂ ದಾರಿ ತಪ್ಪಲ್ಲ ಎಂದು ಕುಟುಕಿದರು.
ಸಶಸ್ತ್ರ ಪಡೆಗಳಲ್ಲಿ ಎಲ್ಲಾ, ಜಾತಿ, ಧರ್ಮ, ಪಂಗಡಗಳ ಜನರು ಇದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಧರ್ಮ ಮತ್ತು ಧಾರ್ಮಿಕ ಆಚರಣೆಗಳನ್ನ ಅನುಸರಿಸುತ್ತಾರೆ. ಆ ಆಚರಣೆಗಳನ್ನು ನಿರ್ವಹಿಸುವ ಪುರೋಹಿತರೂ ಅಲ್ಲಿ ಉಪಸ್ಥಿತರಿರುತ್ತಾರೆ. ಆದ್ರೆ ಸೇನೆಯಲ್ಲಿ ಯಾವುದೇ ರೀತಿಯ ತಾರತಮ್ಯವಿಲ್ಲ. ಜಾತಿವಾದವಿಲ್ಲ, ಕೋಮು ದ್ವೇಷ, ಪಕ್ಷಪಾತವಾಗಲಿ ಇಲ್ಲ. ದೇಶ ಅಂತ ಬಂದಾಗ ಅವರೆಲ್ಲರೂ ಭಾರತೀಯರಾಗಿದ್ದಾರೆ. ಮಿಲಿಟರಿ ಕರ್ತವ್ಯ ನಿರ್ವಹಿಸುವುದೇ ಅವರ ಗುರಿಯಾಗಿದೆ. ಹಾಗಾಗಿ ನಮ್ಮ ಸಶಸ್ತ್ರ ಪಡೆಗಳನ್ನ ರಾಜಕೀಯಕ್ಕೆ ಎಳೆದು ತರೋದು ಸರಿಯಲ್ಲ ಎಂದು ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದರು.
ಸೈನಿಕರಿಗೆ ಒಂದೇ ಧರ್ಮವಿದೆ, ಅದು ಸೈನ್ಯ ಧರ್ಮ ಎಂದು ಹೇಳಿದ್ದಾರೆ. ಅಲ್ಲದೆ, ದೇಶವು ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ, ಸೈನಿಕರು ಶೌರ್ಯದ ಮೂಲಕ ಭಾರತದ ತಲೆಯನ್ನು ಎತ್ತರಕ್ಕೆ ಏರಿಸಿದ್ದಾರೆ ಎಂದು ರಕ್ಷಣಾ ಸಚಿವ ಪ್ರತಿಪಾದಿಸಿದ್ದಾರೆ.
ಮುಂದುವರೆದು ಮಾತನಾಡಿದ ಸಿಂಗ್, ಮೀಸಲಾತಿ ಇರಬೇಕು. ಬಿಜೆಪಿ ಕೂಡ ಮೀಸಲಾತಿಯ ಬೆಂಬಲಿಗರಾಗಿದ್ದೇವೆ. ನಾವು ಬಡವರಿಗೆ ಮೀಸಲಾತಿ ನೀಡಿದ್ದೇವೆ. ಆದರೆ ಸೇನೆಯ ಬಗ್ಗೆ? ನಮ್ಮ ಸೇನಾ ಸೈನಿಕರಿಗೆ ಒಂದೇ ಧರ್ಮವಿದೆ. ಆ ಧರ್ಮ ಸೈನ್ಯ ಧರ್ಮ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮವಿಲ್ಲ. ನಮ್ಮ ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಜಾತಿ, ಪಂಥ ಮತ್ತು ಧರ್ಮದ ಈ ರಾಜಕೀಯವು ದೇಶಕ್ಕೆ ದೊಡ್ಡ ಹಾನಿಯನ್ನು ಉಂಟುಮಾಡಿದೆ. ಸಮಾಜದ ಎಲ್ಲಾ ವರ್ಗಗಳನ್ನು ಮೇಲಕ್ಕೆತ್ತಬೇಕು ಎಂಬುದು ನಮ್ಮ ಚಿಂತನೆಯಾಗಿದೆ. ನಾವು ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದ್ದೇವೆ. ಅಲ್ಲದೆ, ಜಾತಿ, ಪಂಥ ಅಥವಾ ಧರ್ಮದ ಆಧಾರದ ಮೇಲೆ ನಾವು ತಾರತಮ್ಯ ಮಾಡಲು ಬಯಸುವುದಿಲ್ಲ. ನಮ್ಮ ದೇಶದ ಋಷಿಮುನಿಗಳು ಮತ್ತು ಜನರು ಇದರ ಬಗ್ಗೆ ಎಂದಿಗೂ ಯೋಚಿಸಿಲ್ಲ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.
ಮಂಗಳವಾರ ನಡೆದ ಬಿಹಾರ ಚುನಾವಣಾ ಪ್ರಚಾರ ವೇಳೆ ಮಾತನಾಡಿ ರಾಹುಲ್, ಭಾರತೀಯ ಸೇನೆಯು ದೇಶದ ಜನಸಂಖ್ಯೆಯ ಶೇ.10 ರಷ್ಟು ಜನರ ನಿಯಂತ್ರಣದಲ್ಲಿದೆ ಎಂದು ಹೇಳಿದ್ದರು. ಇದು ಸಂಸ್ಥೆಯಲ್ಲಿ ಮೇಲ್ಜಾತಿಗಳ ಪ್ರಾಬಲ್ಯವನ್ನು ಉಲ್ಲೇಖಿಸುತ್ತದೆ ಎಂದು ರಾಹುಲ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿನ ಆರ್ಥಿಕ ಅಸಮಾನತೆಯ ಸಮಸ್ಯೆಯನ್ನು ಅವರು ಎತ್ತಿ ಗಾಂಧಿ, ದೇಶದಲ್ಲಿ ಜನಸಂಖ್ಯೆಯ ಶೇ. 90 ರಷ್ಟು ದಲಿತರು, ಮಹಾದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದವರಾಗಿದ್ದರೂ, ಕಾರ್ಪೊರೇಟ್ ಭಾರತ, ಅಧಿಕಾರಶಾಹಿ, ನ್ಯಾಯಾಂಗ ಮತ್ತು ಇತರ ಪ್ರಮುಖ ಸಂಸ್ಥೆಗಳಲ್ಲಿ ಕಡಿಮೆ ಪ್ರಾತಿನಿಧ್ಯವಿದೆ ಎಂದು ಹೇಳಿದ್ದಾರೆ.
Advertisement