

ಜಲ್ನಾ: ಸಾರ್ವಜನಿಕ ಸ್ಥಳದಲ್ಲಿ ತಾನು ಮೂತ್ರ ವಿಸರ್ಜನೆ ಮಾಡಿದ್ದ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ನಿಂದನೆ, ಟ್ರೋಲ್ ಗಳನ್ನು ತಡೆಯಲಾಗದೇ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ.
ಮಹೇಶ್ ಅಧೆ (27) ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದಾನೆ. ಮಹೇಶ್ ಅಧೆ ಹಾಗೂ ಆತನ ಸ್ನೇಹಿತ ಛತ್ರಪತಿ ಸಂಭಾಜಿ ಮಹಾರಾಜ್ ರೈಲು ನಿಲ್ದಾಣದ ನಾಮಫಲಕ ಹಾಕಲಾಗಿದ್ದ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ವಿಡಿಯೋ ಅ.30 ರಂದು ವೈರಲ್ ಆಗಿತ್ತು.
ತನ್ನ ತಪ್ಪಿನ ಅರಿವಾಗುತ್ತಿದ್ದಂತೆಯೇ ಈ ಯುವಕ ಹಾಗೂ ಆತನ ಸ್ನೇಹಿತ ವಿಡಿಯೋ ಮಾಡಿ ಸಾರ್ವಜನಿಕರ ಕ್ಷಮೆ ಕೋರಿದ್ದರು. ಈ ವಿಡಿಯೋ ಜೊತೆಗೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಸಹ ಮತ್ತಷ್ಟು ವೈರಲ್ ಆಗಿ ಆನ್ ಲೈನ್ ಕಿರುಕುಳ, ಟ್ರೋಲ್ ನಿಂದನೆಗಳು ಹೆಚ್ಚಾಗಿವೆ. ಅಷ್ಟೇ ಅಲ್ಲದೇ ಆತನಿಗೆ ಬೆದರಿಕೆ ಕರೆಗಳು ಬರುವುದಕ್ಕೂ ಪ್ರಾರಂಭವಾಗಿದ್ದವು ಇದನ್ನು ಯುವಕ ಮನೆಯವರ ಬಳಿಯೂ ಹೇಳಿಕೊಂಡಿದ್ದ. ನಿಂದನೆಗಳು ಹೆಚ್ಚಾದಂತೆ ಅದನ್ನು ತಡೆಯಲಾಗದೇ ಯುವಕ ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರ ಹೋಗಿದ್ದ ಎಷ್ಟೇ ಸಮಯವಾದರೂ ವಾಪಸ್ಸಾಗದೇ ಇದ್ದಾಗ ಆತನ ಕುಟುಂಬದವರು ಹುಡುಕಿದ್ದಾರೆ. ಈ ವೇಳೆ ಬಾವಿಯೊಂದರಲ್ಲಿ ಆತನ ಶವ ಪತ್ತೆಯಾಗಿದೆ.
ಅಧೇ ಅವರ ಸೋದರಸಂಬಂಧಿ ಅಖಿಲೇಶ್ ನೀಡಿದ ದೂರಿನ ಮೇರೆಗೆ, ಪೊಲೀಸರು ಬುಧವಾರ ತಡರಾತ್ರಿ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 3(5) (ಸಾಮಾನ್ಯವೀಡಿಯೊವನ್ನು ಪ್ರಸಾರ ಮಾಡಿದ ಮತ್ತು ಬೆದರಿಕೆ ಹಾಕಿದ) ಏಳು ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
Advertisement