

ಪಾಟ್ನಾ/ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಪ್ರಚಾರಕ್ಕೆ ಭಾನುವಾರ ಸಂಜೆ ತೆರೆ ಬೀಳುತ್ತಿದ್ದಂತೆಯೇ, ಮಹಿಳಾ ಮತದಾರರ ಮೇಲೆ ಹೆಚ್ಚಿನ ಭರವಸೆ ಇಡಲಾಗಿದೆ. ಮೊದಲ ಹಂತದ ಮತದಾನಕ್ಕಿಂತ ಹೆಚ್ಚಿನ ಮತದಾನವಾಗುವ ನಿರೀಕ್ಷೆಯಿರುವ ಮಹಿಳಾ ಮತದಾರರು, ಬದಲಾವಣೆಯ ರಾಜಕೀಯ ಗಾಳಿ ಬೀಸುತ್ತದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಸಾಧ್ಯತೆಯಿದೆ.
ಟಿಎನ್‌ಐಇ ಜೊತೆ ಮಾತನಾಡಿದ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು, ಎರಡನೇ ಹಂತದ ಫಲಿತಾಂಶಗಳು ಹೆಚ್ಚಾಗಿ ಮಹಿಳಾ ಮತದಾನದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು. ಇದು ಮೊದಲ ಹಂತದ ಮತದಾನದಲ್ಲಿ ದಾಖಲಾದ ಮತದಾನಕ್ಕಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬಿಹಾರದ ಮತದಾರರಲ್ಲಿ ಸುಮಾರು ಶೇ. 42 ಕ್ಕಿಂತ ಹೆಚ್ಚಿನ ಮಹಿಳೆಯರು ಇದ್ದಾರೆ. 7.43 ಕೋಟಿ ನೋಂದಾಯಿತ ಮತದಾರರಲ್ಲಿ ಸುಮಾರು 3.5 ಕೋಟಿ ಮಹಿಳೆಯರಿದ್ದು, ಇತ್ತೀಚಿಗೆ ನಡೆದ ಮೊದಲ ಹಂತದ ಮತದಾನದಲ್ಲಿ ಪ್ರಭಾವಶಾಲಿ ಗುಂಪಾಗಿ ಹೊರಹೊಮ್ಮಿದ್ದಾರೆ.
2010 ರಿಂದ ಅವರ ಮತದಾನವು ನಿರಂತರವಾಗಿ ಪುರುಷರಿಗಿಂತ ಹೆಚ್ಚಾಗಿದ್ದು, ಇದು ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸಿದೆ. ನವೆಂಬರ್ 6 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಒಟ್ಟಾರೇ ಶೇ. 65.8 ರಷ್ಟು ಮತದಾನವಾಗಿದೆ. ಈ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾಗಿ ಚುನಾವಣಾ ಆಯೋಗ ತಿಳಿಸಿದೆ.
ಎರಡೂ ಮೈತ್ರಿಕೂಟಗಳು ನೀಡಿರುವ ಕಲ್ಯಾಣ ಭರವಸೆಗಳನ್ನು ಮಹಿಳೆಯರು ಎಷ್ಟು ಸುಲಭವಾಗಿ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಫಲಿತಾಂಶ ಅವಲಂಬಿತವಾಗಿದೆ. ಏಕೆಂದರೆ ಮಹಿಳೆಯರು ಹೆಚ್ಚಾಗಿ ಹಣ ವರ್ಗಾವಣೆ, ಶಿಕ್ಷಣಕ್ಕೆ ಸಹಾಯಧನ, ಮದ್ಯ ನಿಷೇಧದಂತಹ ಪ್ರಯೋಜನಗಳ ಮೇಲೆ ಒಲವು ಹೊಂದುವ ಸಾಧ್ಯತೆಯಿದೆ ಎಂಬುದು ಸಮೀಕ್ಷೆ ವೇಳೆ ತಿಳಿದುಬಂದಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
"ಮಹಿಳಾ ಮತದಾರರು ಖಂಡಿತವಾಗಿಯೂ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಮತ್ತು ವಿರೋಧ ಪಕ್ಷ ಮಹಾಘಟಬಂಧನ್ (MGB) ಎರಡರ ಭವಿಷ್ಯವನ್ನು ನಿರ್ಧರಿಸುವ ಒಂದು ಭಾಗವಾಗಿದ್ದಾರೆ" ಎಂದು ಪಾಟ್ನಾ ಮೂಲದ ರಾಜಕೀಯ ವಿಶ್ಲೇಷಕ ಡಾ. ರವಿ ಕೆ ಸಿನ್ಹಾ ಹೇಳಿದ್ದಾರೆ. ಒಂದು ತಿಂಗಳ ಕಾಲ ನಡೆದ ಪ್ರಚಾರಗಳಲ್ಲಿ, ಎರಡೂ ರಾಜಕೀಯ ಮೈತ್ರಿಕೂಟಗಳು ಈ ನಿರ್ಣಾಯಕ ಲಿಂಗ ಆಧಾರಿತ ಮತಬ್ಯಾಂಕ್ ನ್ನು ಒಲಿಸಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನ ನಡೆಸಿವೆ. ಅವರ ಬೆಂಬಲ ಗಳಿಸಲು ಎಲ್ಲಾ ರೀತಿಯ ಭರವಸೆ ನೀಡಲಾಗಿದೆ.
ಎನ್‌ಡಿಎ ನೇತೃತ್ವದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರ ಇತ್ತೀಚಿಗೆ 'ಮಹಿಳಾ ರೋಜ್‌ಗಾರ್' ಯೋಜನೆಯಡಿ ಎರಡು ಕೋಟಿಗೂ ಹೆಚ್ಚು ಮಹಿಳೆಯರಿಗೆ ತಲಾ 10,000 ರೂ.ಗಳ ನೇರ ನಗದು ವರ್ಗಾವಣೆ ಯೋಜನೆಯನ್ನು ಘೋಷಿಸಿದ್ದರು. ಇದು ಆರ್ಥಿಕ ಸ್ವಾತಂತ್ರ್ಯ ಮತ್ತು ಮನೆಯ ಸ್ಥಿರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಹಣವನ್ನು ನೇರವಾಗಿ ಮಹಿಳೆಯರ ಖಾತೆಗಳಿಗೆ ಜಮೆ ಮಾಡಲಾಗಿದೆ. ಅವರು ಪ್ರಚಾರದ ಸಮಯದಲ್ಲಿ ಮೌನವಾಗಿದ್ದರೂ, ಮೊದಲ ಹಂತದಲ್ಲಿ ಮತಗಟ್ಟೆಯಲ್ಲಿ ಗಮನಾರ್ಹ ಛಾಪು ಮೂಡಿಸಿದ್ದಾರೆ. ಅಂತಿಮ ಫಲಿತಾಂಶವನ್ನು ರೂಪಿಸುವಲ್ಲಿ ಮತ್ತೆ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ.
ಆರ್‌ಜೆಡಿ ನೇತೃತ್ವದ ಮಹಾಘಟ್ ಬಂಧನ್ ಅಧಿಕಾರಕ್ಕೆ ಬರದಂತೆ ತಡೆಯಲು ಜಂಗಲ್ ರಾಜ್" ಅನ್ನು ಮತದಾರರಿಗೆ ನೆನಪಿಸಲು ಎನ್ ಡಿಎ ಪ್ರಯತ್ನಿಸಿದೆ. ಆ ಸಮಯದಲ್ಲಿ ಮಹಿಳೆಯರು ಅಸುರಕ್ಷಿತರಾಗಿದ್ದರು. ಆರ್ಥಿಕ ನೆರವು ಮತ್ತು ಭಯದ ಅಂಶ ಎರಡೂ ಈ ಬಾರಿಯ ಚುನಾವಣೆಗಳ ಮೇಲೆ ಹೆಚ್ಚು ಪ್ರಭಾವ ಬೀರಿವೆ" ಎಂದು ಬಿಹಾರದ ಕೆಲವು ಮತದಾರರು ಹೇಳುತ್ತಿದ್ದಾರೆ. ಒಟ್ಟಾರೇ ನವೆಂಬರ್ 14 ರಂದು ಪ್ರಕಟವಾಗುವ ಚುನಾವಣಾ ಫಲಿತಾಂಶದಲ್ಲಿ ಎಲ್ಲವೂ ಗೊತ್ತಾಗಲಿದೆ.
Advertisement