

ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಸೋಮವಾರ ಬೆಳಗಿನ ಜಾವ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಸುಮಾರು 200 ಅಡಿಗಳಷ್ಟು ಎಳೆದೊಯ್ದ ಪರಿಣಾಮ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲವಾಡ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದ ಈ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಥಳೀಯ ಉದ್ಯಮಿಯೊಬ್ಬರ ಪುತ್ರ, ಬಿಎಂಡಬ್ಲ್ಯೂ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ರಾಜ್‌ಕೋಟ್ (ತಾಲೂಕು) ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ನಥಾನಿ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಡಿಕ್ಕಿಯ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ ಎಂದು ಅವರು ತಿಳಿಸಿದ್ದಾರೆ.
"ರಸ್ತೆ ದಾಟಲು ಯತ್ನಿಸುತ್ತಿದ್ದ ಬೈಕ್ ಗೆ, ಎಸ್‌ಯುವಿ ಕಾರು ಡಿಕ್ಕಿ ಹೊಡೆದು ಸುಮಾರು 200 ಅಡಿಗಳಷ್ಟು ಎಳೆದೊಯ್ದಿದೆ. ಅಪಘಾತದ ಪರಿಣಾಮ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ" ಎಂದು ಸಬ್-ಇನ್ಸ್‌ಪೆಕ್ಟರ್ ಪಿಜೆ ಪರ್ಮಾರ್ ಅವರು ಹೇಳಿದ್ದಾರೆ.
ಕಾರು ಚಾಲಕ ಆತ್ಮನ್ ಪಟೇಲ್(26) ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಮತ್ತು ನಂತರ ಆತನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement