

ಪಾಟ್ನಾ: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ಮಂಗಳವಾರ ಪೂರ್ಣಗೊಂಡಿದ್ದು, ದಾಖಲೆಯ ಶೇ. 67.14 ರಷ್ಟು ಮತದಾನ ನಡೆದಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ಮುಕ್ತಾಯದ ವೇಳೆಗೆ ಶೇ. 67.14 ರಷ್ಟು ಮತದಾನ ದಾಖಲಾಗಿದ್ದು, ಇದು ಇದುವರೆಗಿನ ಅತ್ಯಧಿಕ ಮತದಾನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3.70 ಕೋಟಿ ಮತದಾರರನ್ನು ಒಳಗೊಂಡಿರುವ 122 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದ್ದು, ಮತದಾನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಏಕೆಂದರೆ ಅನೇಕ ಮತಗಟ್ಟೆಗಳಲ್ಲಿ ಮತದಾರರ ಸರತಿ ಸಾಲುಗಳು ಕಂಡುಬಂದವು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದ ಏಕೈಕ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆ ಕಿಶನ್‌ಗಂಜ್‌ನಲ್ಲಿ ಇದುವರೆಗೆ ಅತಿ ಹೆಚ್ಚು ಮತದಾನ ಶೇಕಡಾವಾರು ದಾಖಲಾಗಿದ್ದು, ಶೇ. 76.26 ರಷ್ಟು ಮತದಾನವಾಗಿದೆ. ಪಕ್ಕದ ಜಿಲ್ಲೆ ಪೂರ್ಣಿಯಾ ಮತ್ತು ಕಟಿಹಾರ್ ನಂತರದ ಸ್ಥಾನಗಳಲ್ಲಿವೆ.
ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿರುವ ನಿತೀಶ್ ಕುಮಾರ್ ಅವರು ಸ್ವತಃ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲವಾದರೂ, ಅವರ ಸಂಪುಟದ ಎಂಟು ಸಚಿವರು ಎರಡನೇ ಹಂತದ ಚುನಾವಣೆಯಲ್ಲಿ ಕಣದಲ್ಲಿದ್ದಾರೆ.
ಚುನಾವಣೆ ನಡೆಯುತ್ತಿರುವ ಹಲವು ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದ್ದು, ಎರಡನೇ ಹಂತವು ಬಿಹಾರದಲ್ಲಿ ಇಂಡಿಯಾ ಬಣದ ಎರಡನೇ ಅತಿದೊಡ್ಡ ಘಟಕವಾಗಿರುವ ಕಾಂಗ್ರೆಸ್‌ಗೆ ಮಹತ್ವದ್ದಾಗಿದೆ.
ನವೆಂಬರ್ 6 ರಂದು ನಡೆದ ಮೊದಲ ಹಂತದಲ್ಲಿ, 121 ಕ್ಷೇತ್ರಗಳ 3.75 ಕೋಟಿ ಮತದಾರರ ಪೈಕಿ ದಾಖಲೆಯ ಶೇ 65.09 ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದರು.
Advertisement