

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನೋಯ್ಡಾದಲ್ಲಿ 2005-2006ರಲ್ಲಿ ನಡೆದ ನಿಥಾರಿ ಸರಣಿ ಹತ್ಯೆಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿದ್ದ ಕೊನೆಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲೂ ಆರೋಪಿ ಸುರೇಂದ್ರ ಕೋಲಿಯನ್ನು ಖುಲಾಸೆಗೊಳಿಸಿ ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸರಣಿ ಹತ್ಯಯ ಪ್ರಮುಖ ಆರೋಪಿ ಸುರೇಂದ್ರ ಕೋಲಿ ಇತರೆ ಯಾವುದೇ ಪ್ರಕರಣದಲ್ಲಿ ಆರೋಪಿಯಾಗಿರದಿದ್ದರೆ ಅವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಉನ್ನತ ನ್ಯಾಯಾಲಯದ ಈ ತೀರ್ಪು ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಮತ್ತು ಪ್ರಾಸಿಕ್ಯೂಷನ್‌ಗೆ ದೊಡ್ಡ ಹಿನ್ನಡೆಯಾಗಿದೆ.
ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್ ಭಾರತದ ಇತಿಹಾಸದಲ್ಲಿ ಅತ್ಯಂತ ಭಯಾನಕ ಕ್ರಿಮಿನಲ್ ಪ್ರಕರಣಗಳಲ್ಲಿ ಒಂದನ್ನು ಮುಕ್ತಾಯಗೊಳಿಸಿದೆ.
ಒಂದು ಪ್ರಕರಣದಲ್ಲಿ ತನ್ನ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಕೋಲಿ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಕ್ಟೋಬರ್ 7 ರಂದು ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಕೋಲಿ ವಿರುದ್ಧ ದಾಖಲಾಗಿದ್ದ ಒಟ್ಟು 13 ಪ್ರಕರಣಗಳಲ್ಲಿ, ಈಗಾಗಲೇ 12 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಇಂದಿನ ಖುಲಾಸೆಯೊಂದಿಗೆ, ಕೋಲಿ ಈಗ ಸಂಪೂರ್ಣವಾಗಿ ದೋಷಮುಕ್ತರಾಗಿದ್ದಾರೆ.
"ಕ್ಯುರೇಟಿವ್ ಅರ್ಜಿಯನ್ನು ಅನುಮತಿಸಲಾಗಿದೆ. ಅರ್ಜಿದಾರರನ್ನು ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ ಮತ್ತು ಅವರನ್ನು ತಕ್ಷಣವೇ ಬಿಡುಗಡೆ ಮಾಡಲಾಗುತ್ತದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಏನಿದು ಪ್ರಕರಣ?
ಡಿಸೆಂಬರ್ 29, 2006 ರಂದು ನೋಯ್ಡಾದ ನಿಥಾರಿ ಗ್ರಾಮದ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಮನೆಯ ಹಿಂದಿನ ಚರಂಡಿಯಲ್ಲಿ ಕನಿಷ್ಠ ಎಂಟು ಮಕ್ಕಳ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿತ್ತು. ಆ ಮೂಲಕ ಈ ಸರಣಿ ಹತ್ಯಾಕಾಂಡ ಪ್ರಕರಣ ಬೆಳಕಿಗೆ ಬಂದಿತ್ತು. ಈ ಭೀಕರ ಪ್ರಕರಣವು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಈ ಬಗ್ಗೆ ಹಲವಾರು ತನಿಖೆಗಳು ಮತ್ತು ವಿಚಾರಣೆಗಳು ನಡೆದಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಹಾಗೂ ಆತನ ಮನೆಕೆಲಸದವನಾಗಿದ್ದ ಸುರೇಂದರ್ ಕೋಲಿಯನ್ನು ಅರೆಸ್ಟ್ ಮಾಡಲಾಗಿತ್ತು. ಒಟ್ಟು 14 ಪ್ರಕರಣಗಳ ಪೈಕಿ 15 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಗೆ ಕೋಲಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.
Advertisement