

ನವದೆಹಲಿ: ದೆಹಲಿ ಕೆಂಪು ಕೋಟೆ ಕಾರು ಸ್ಫೋಟದ ತನಿಖೆ ತೀವ್ರಗೊಳ್ಳುತ್ತಿದ್ದಂತೆಯೇ ರಹಸ್ಯವಾಗಿದ್ದ ಅನೇಕ ಮಾಹಿತಿಗಳು ಹೊರಗೆ ಬರುತ್ತಿವೆ. ಇದೀಗ ಈ ಪ್ರಕರಣದ ಮೂವರು ಶಂಕಿತರಾದ ಡಾ. ಶಾಹೀನ್ ಸಾಹೀದ್ ಮತ್ತು ಡಾ. ಮುಜಮ್ಮಿಲ್ ಶಕೀಲ್ ಅವರಿಗೆ ಉದ್ಯೋಗ ನೀಡಿದ್ದ ಅಲ್ ಫಲಾಹ್ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಜಾವೇದ್ ಅಹ್ಮದ್ ಸಿದ್ದಿಕಿ ಅವರ ತನಿಖೆ ನಡೆಸಲಾಗಿದೆ. ನಿಧಿ ವಿಚಾರದಲ್ಲಿ ವಿಶ್ವವಿದ್ಯಾಲಯವೂ ED ತನಿಖೆ ಎದುರಿಸುತ್ತಿದೆ.
ಹಳೆಯ ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿದ್ದಿಕ್ಕಿ ಭಾಗಿಯಾದ ಆರೋಪವಿದೆ. ಸುಮಾರು ರೂ. 7.5 ಕೋಟಿ ವಂಚನೆಯ ಆರೋಪದಲ್ಲಿ ಮೂರು ವರ್ಷ ಜೈಲು ಸೇರಿದ್ದರು ಎಂದು ಮೂಲಗಳು ಹೇಳಿವೆ.
ಈ ಮಧ್ಯೆ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ ಮೊಹಮ್ಮದ್ ರಾಜಿ, ಸಿದ್ದಿಕಿ ವಿರುದ್ಧದ ಎಲ್ಲಾ ವಂಚನೆ ಆರೋಪಗಳನ್ನು ನಿರಾಕರಿಸಿದ್ದಾರೆ. ಇದರಲ್ಲಿ ರೂ. 7.5 ಕೋಟಿ ವಂಚನೆ ಆರೋಪ, ಶಕೀಲ್ ನೇಮಕಾತಿ ಬಗ್ಗೆ ತನಗೆ "ಯಾವುದೇ ಮಾಹಿತಿ" ಇಲ್ಲ. ನೇಮಕಾತಿ ಮಾಡಿಕೊಳ್ಳುವುದು ಅಥವಾ ಬಿಡುವುದು ಕುಲಪತಿಗಳ ಕೆಲಸ ಎಂದು ರಾಜಿ ಹೇಳಿದ್ದಾರೆ.
ಯಾರಿದು ಸಿದ್ದಿಕಿ? ಮಧ್ಯಪ್ರದೇಶದ ಮ್ಹೋವ್‌ನಲ್ಲಿ ಜನಿಸಿದ ಸಿದ್ದಿಕಿ, ಒಂಬತ್ತು ಕಂಪನಿಗಳನ್ನು ನಡೆಸುತ್ತಿದ್ದರು. ಇವೆಲ್ಲವೂ ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ ನೊಂದಿಗೆ ಸಂಪರ್ಕ ಹೊಂದಿವೆ. ಈ ಒಂಬತ್ತು ಸಂಸ್ಥೆಗಳು ಶಿಕ್ಷಣ, ಸಾಫ್ಟ್‌ವೇರ್, ಹಣಕಾಸು ಸೇವೆಗಳು ಮತ್ತು ಇಂಧನ ವಲಯಗಳಿಗೆ ಸಂಬಂಧಿಸಿವೆ. ಅವುಗಳಲ್ಲಿ ಬಹುತೇಕ ದೆಹಲಿಯಲ್ಲಿರುವ ಕಟ್ಟಡವೊಂದರ ಒಂದೇ ವಿಳಾಸದಲ್ಲಿವೆ. ಅದು ಓಖ್ಲಾ ಪಕ್ಕದ ಜಾಮಿಯಾ ನಗರದಲ್ಲಿರುವ ಅಲ್-ಫಲಾಹ್ ಹೌಸ್ ಆಗಿದೆ.ಈ ಸಂಸ್ಥೆಗಳಲ್ಲಿ ಹೆಚ್ಚಿನವು 2019 ರವರೆಗೆ ಸಕ್ರಿಯವಾಗಿದ್ದವು ನಂತರ ಅವುಗಳನ್ನು ಮುಚ್ಚಲಾಗಿದೆ ಅಥವಾ ನಿಷ್ಕ್ರೀಯವಾಗಿವೆ.
ಆದಾಗ್ಯೂ, ಅಲ್-ಫಲಾಹ್ ವೈದ್ಯಕೀಯ ಸಂಶೋಧನಾ ಪ್ರತಿಷ್ಠಾನವು 1997 ರಲ್ಲಿ ಎಂಜಿನಿಯರಿಂಗ್ ಕಾಲೇಜಾಗಿ ಆರಂಭವಾದದ್ದು ಈಗ 78 ಎಕರೆ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದು ಕೂಡಾ NAAC ಯಿಂದ ವಿಚಾರಣೆಯನ್ನು ಎದುರಿಸುತ್ತಿದೆ. ಪ್ರಾಸಂಗಿಕವಾಗಿ, ಅಲ್-ಫಲಾಹ್ ಕಟ್ಟಡವು ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್‌ನ ಕಚೇರಿಯೂ ಆಗಿದೆ.
ಈಗ ಮತ್ತೆ ಹಳೆಯ ಕ್ರಿಮಿನಲ್ ಪ್ರಕರಣವೊಂದು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಿದ್ದಿಕಿ ಮತ್ತು ಇತರರು ಅಲ್-ಫಲಾಹ್ ಸಮೂಹದ ಕಂಪನಿಗಳಲ್ಲಿ ನಕಲಿ ಹೂಡಿಕೆ ಯೋಜನೆಗ ನಡೆಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಸಿದ್ದಿಕಿ ಮತ್ತು ಅವರ ಸಹಚರರು ಅಲ್-ಫಲಾಹ್ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಜನರನ್ನು ಮನವೊಲಿಸಿ, ನಂತರ ಅವುಗಳನ್ನು ನಕಲಿ ದಾಖಲೆಗಳ ಮೂಲಕ ಷೇರುಗಳಾಗಿ ಪರಿವರ್ತಿಸಲಾಗಿದೆ ಸಂಗ್ರಹಿಸಿದ 7.5 ಕೋಟಿ ರೂ.ಗಳನ್ನು ನಂತರ ಆರೋಪಿಯ ವೈಯಕ್ತಿಕ ಖಾತೆಗಳಿಗೆ ಕಳುಹಿಸಲಾಗಿದೆ ಎಂಬ ಆರೋಪವಿದೆ.
ಸಿದ್ದಿಕಿ ಅವರನ್ನು 2001 ರಲ್ಲಿ ಬಂಧಿಸಲಾಗಿತ್ತು. ಮಾರ್ಚ್ 2003 ರಲ್ಲಿ ದೆಹಲಿ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಫೆಬ್ರವರಿ 2004ರಲ್ಲಿ ಹೂಡಿಕೆದಾರರ ಹಣವನ್ನು ಮರುಪಾವತಿಸುವುದಾಗಿ ಒಪ್ಪಿಕೊಂಡ ನಂತರ ಅವರಿಗೆ ಜಾಮೀನು ಸಿಕ್ಕಿತ್ತು. ಜನವರಿ 2020 ರ ಹೊತ್ತಿಗೆ ದೆಹಲಿ ಪೊಲೀಸರು ಓಖ್ಲಾ ಕಚೇರಿಯ ಮೇಲೆ ದಾಳಿ ಮಾಡಿದ್ದರು. ಸಿದ್ದಿಕಿ ಹೂಡಿಕೆದಾರರನ್ನು ವಂಚಿಸಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಪೊಲೀಸರು ದಾಳಿ ನಡೆಸಿದ್ದರು.
Advertisement