

ನವದೆಹಲಿ: ಭಾರಿ ಪ್ರಮಾಣದ ಸ್ಫೋಟಕ ಪತ್ತೆ ಮತ್ತು ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಟೋಟಕ್ಕೆ ಸಂಬಂಧಿಸಿದಂತೆ ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್–ಫಲಾಹ್ ವಿಶ್ವವಿದ್ಯಾಲಯದ ಮೇಲೆ ಪೊಲೀಸರು ನಿಗಾ ಇಟ್ಟಿರುವ ಬೆನ್ನಲ್ಲೇ, ತನ್ನ ವೆಬ್‌ಸೈಟ್‌ನಲ್ಲಿ ಸುಳ್ಳು ಮಾನ್ಯತೆಯನ್ನು ಪ್ರದರ್ಶಿಸಿದ್ದಕ್ಕಾಗಿ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಶೋಕಾಸ್ ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
'NAAC ನಿಂದ ಮಾನ್ಯತೆ ಪಡೆದಿಲ್ಲದ ಅಥವಾ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿಲ್ಲದ' ಅಲ್-ಫಲಾಹ್ ವಿಶ್ವವಿದ್ಯಾಲಯವು ತನ್ನ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಅಲ್-ಫಲಾಹ್ ವಿಶ್ವವಿದ್ಯಾಲಯವು ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್‌ನ ಒಂದು ಪ್ರಯತ್ನವಾಗಿದ್ದು, ಇದು ಕ್ಯಾಂಪಸ್‌ನಲ್ಲಿ ಮೂರು ಕಾಲೇಜುಗಳನ್ನು ನಡೆಸುತ್ತಿದೆ. ಅಲ್ ಫಲಾಹ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (1997 ರಿಂದ NAAC ನಿಂದ A ಗ್ರೇಡ್), ಅಲ್-ಫಲಾಹ್ ಸ್ಕೂಲ್ ಆಫ್ ಎಜುಕೇಶನ್ ಅಂಡ್ ಟ್ರೈನಿಂಗ್ (2006 ರಿಂದ A ಗ್ರೇಡ್) ಮತ್ತು ಬ್ರೌನ್ ಹಿಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (2008 ರಿಂದ A ಗ್ರೇಡ್) ಯಂತೆಯೇ NAAC ನಿಂದ ಮಾನ್ಯತೆ ಪಡೆದಿದೆ ಎಂದಿರುವುದಾಗಿ ಶೋಕಾಸ್ ನೋಟಿಸ್‌ನಲ್ಲಿ ಹೇಳಲಾಗಿದೆ.
'ಇದು ಸಂಪೂರ್ಣವಾಗಿ ತಪ್ಪು ಮತ್ತು ಸಾರ್ವಜನಿಕರನ್ನು, ವಿಶೇಷವಾಗಿ ಪೋಷಕರು, ವಿದ್ಯಾರ್ಥಿಗಳು ಮತ್ತು ಪಾಲುದಾರರನ್ನು ದಾರಿ ತಪ್ಪಿಸುವಂತಿದೆ' ಎಂದು ಶೋಕಾಸ್ ನೋಟಿಸ್‌ನಲ್ಲಿ ಹೇಳಲಾಗಿದೆ.
ಈ ಸಂಬಂಧ NAAC ವಿವರಣೆಯನ್ನು ಕೇಳಿದೆ ಮತ್ತು NAAC ಮಾನ್ಯತೆ ಪಡೆದಿರುವ ವಿವರಗಳನ್ನು ತನ್ನ ವೆಬ್‌ಸೈಟ್‌ನಿಂದ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಅಥವಾ ವಿತರಿಸಲಾದ ಯಾವುದೇ ದಾಖಲೆಗಳಿಂದ ತೆಗೆದುಹಾಕುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದೆ.
ಸೋಮವಾರ, ದೆಹಲಿಯ ಕೆಂಪು ಕೋಟೆಯ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನಗತಿಯ ಸಂಚಾರವಿದ್ದ ವೇಳೆ ಕಾರೊಂದರಲ್ಲಿ ಸ್ಫೋಟ ಸಂಭವಿಸಿದ್ದು, 13 ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ.
ಹರಿಯಾಣದ ಫರಿದಾಬಾದ್‌ನಲ್ಲಿ ಪತ್ತೆಯಾದ ಸ್ಫೋಟಕಗಳಿಗೆ ಸಂಬಂಧಿಸಿದಂತೆ ಬಂಧಿತರಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮೂವರು ವೈದ್ಯರು ಸೇರಿದ್ದಾರೆ.
Advertisement