

ನವದೆಹಲಿ: ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಮೂರನೇ ಕಾರನ್ನು ಹಲವು ಭದ್ರತಾ ಸಂಸ್ಥೆಗಳು ಹುಡುಕುತ್ತಿವೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.
ಸೋಮವಾರ ಸಂಜೆ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹನ್ನೆರಡು ಜನರು ಸಾವಿಗೀಡಾಗಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ.
ತನಿಖಾಧಿಕಾರಿಗಳು ಶಂಕಿತ ಆರೋಪಿ ಡಾ. ಉಮರ್ ಉನ್ ನಬಿ ಅವರಿಗೆ ಸೇರಿದ್ದು ಎನ್ನಲಾದ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ಇದು ಘಟನೆಯಲ್ಲಿ ಬಳಸಿರುವ ಎರಡನೇ ಕಾರು ಎನ್ನಲಾಗಿದೆ.
ಫರಿದಾಬಾದ್ ಪೊಲೀಸರು DL 10 CK 0458 ನೋಂದಣಿ ಸಂಖ್ಯೆ ಹೊಂದಿರುವ ಕೆಂಪು ಬಣ್ಣದ ಇಕೋಸ್ಪೋರ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಿದ ಈ ಕಾರನ್ನು ಖಂಡವಾಲಿ ಗ್ರಾಮದ ಬಳಿ ನಿಲ್ಲಿಸಲಾಗಿತ್ತು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇದೀಗ, ಕೃತ್ಯಕ್ಕೆ ಬಳಸಿದ್ದ ಮಾರುತಿ ಸುಜುಕಿ ಬ್ರೀಝಾ ಎಂದು ಶಂಕಿಸಲಾದ ಮೂರನೇ ಕಾರು ಪತ್ತೆಯಾಗಿಲ್ಲ.
'ಕಾಣೆಯಾಗಿರುವ ಮೂರನೇ ಕಾರನ್ನು ಆರೋಪಿಗಳು ಸ್ಥಳ ಪರಿಶೀಲನೆ ಅಥವಾ ತಪ್ಪಿಸಿಕೊಳ್ಳಲು ಬಳಸಿದ್ದಾರೆಂದು ಶಂಕಿಸಲಾಗಿದೆ. ಮೂರನೇ ಕಾರನ್ನು ಪತ್ತೆಹಚ್ಚಲು ಇದೀಗ ಹಲವು ತನಿಖಾ ತಂಡಗಳು ಹುಡುಕುತ್ತಿವೆ' ಎಂದು ಮೂಲಗಳು ತಿಳಿಸಿವೆ.
ಮಾರುತಿ ಬ್ರೀಝಾವನ್ನು ಪತ್ತೆಹಚ್ಚಲು ದೆಹಲಿ-ಎನ್‌ಸಿಆರ್ ಮತ್ತು ಪಕ್ಕದ ರಾಜ್ಯಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
Advertisement