

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟದ ಮುಖ್ಯ ಮಂತ್ರಿ ಅಭ್ಯರ್ಥಿಯೇ ಸೋಲಿನತ್ತ ಮುಖ ಮಾಡಿದ್ದಾರೆ.
ಹೌದು.. ವಿರೋಧ ಪಕ್ಷದ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಈಗ ತಮ್ಮ ಕುಟುಂಬದ ಭದ್ರಕೋಟೆ ಎಂದೇ ಕರೆಯಲಾಗುವ ರಾಘೋಪುರ ಕ್ಷೇತ್ರದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ. ಮತ ಎಣಿಕೆ ಆರಂಭವಾಗಿ ಐದೂವರೆ ಗಂಟೆಗಳಲ್ಲಿ ತೇಜಸ್ವಿ 2,000 ಕ್ಕೂ ಹೆಚ್ಚು ಮತಗಳಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ.
ಬಿಹಾರದಲ್ಲಿ ಹೈವೋಲ್ಟೇಜ್ ವಿಧಾನಸಭಾ ಚುನಾವಣೆಯ ಮತಗಳನ್ನು ಇಂದು ಎಣಿಕೆ ಮಾಡಲಾಗುತ್ತಿದ್ದು, 36 ವರ್ಷದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರೋಧ ಪಕ್ಷ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಮುಂಜಾನೆ ಅವರು ಮಾಧ್ಯಮಗಳಿಗೆ, "ಇದು ಜನರ ಗೆಲುವು. ಬದಲಾವಣೆ ಬರುತ್ತದೆ. ನಾವು ಸರ್ಕಾರ ರಚಿಸುತ್ತಿದ್ದೇವೆ" ಎಂದು ಹೇಳಿದ್ದರು.
ಆದರೆ ಈ ಹೇಳಿಕೆ ಬಂದ ಕೆಲವೇ ಗಂಟೆಗಳಲ್ಲಿ ಇಡೀ ಚಿತ್ರಣ ಬದಲಾಗಿದ್ದು, ಸ್ವಕ್ಷೇತ್ರ ರಾಘೋಪುರದಲ್ಲೇ ತೇಜಸ್ವಿ ಯಾದವ್ ಸೋಲಿನತ್ತ ಮುಖ ಮಾಡಿದ್ದಾರೆ. ತೇಜಸ್ವಿ ಯಾದವ್ ಸುಮಾರು 5000 ಮತಗಳಿಂದ ಹಿನ್ನಡೆಯಲ್ಲಿದ್ದಾರೆ ಎನ್ನಲಾಗಿದೆ. ಅವರ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ್ ಕುಮಾರ್ 4829 ಮತಗಳಿಂದ ಮುಂದಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.
ಈ ಹಿಂದೆ ಇದೇ ಸತೀಶ್ ಯಾದವ್ 2010 ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿದ್ದ ರಾಬ್ರಿ ದೇವಿ ಅವರನ್ನೂ ಕೂಡ ಸೋಲಿಸಿದ್ದರು. ಅಂತೆಯೇ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಕೂಡ ರಾಘೋಪುರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಅಂದಹಾಗೆ ರಾಘೋಪುರ ಆರ್‌ಜೆಡಿಯ ಭದ್ರಕೋಟೆಯಾಗಿದ್ದು, ತೇಜಸ್ವಿ ಯಾದವ್ ಇದೇ ಕ್ಷೇತ್ರದಿಂದ ಕಳೆದ 10 ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. ಇದಕ್ಕೂ ಮೊದಲು ತೇಜಸ್ವಿ ಯಾದವ್ ಅವರ ತಂದೆ ಮತ್ತು ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಮತ್ತು ಅವರ ತಾಯಿ ರಾಬ್ರಿ ದೇವಿ ಇದೇ ಕ್ಷೇತ್ರದಿಂದ ಸತತವಾಗಿ ಆರಿಸಿ ಬಂದಿದ್ದರು. ತೇಜಸ್ವಿ 2015 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2020 ರ ಚುನಾವಣೆಯಲ್ಲಿ ಅವರು 38,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಇಲ್ಲಿ ಗೆಲವು ಸಾಧಿಸಿದ್ದರು.
Advertisement