

ಫಿರೋಜ್‌ಪುರ (ಪಂಜಾಬ್): ಆರ್‌ಎಸ್‌ಎಸ್ ನಾಯಕನ ಪುತ್ರನನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಸಂತ್ರಸ್ತನನ್ನು ನವೀನ್ ಅರೋರಾ (32) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ನವೀನ್ ಅವರ ತಂದೆ ಬಲದೇವ್ ರಾಜ್ ಅರೋರಾ ಕಳೆದ ಹಲವು ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೊಂದಿಗೆ ಸಂಬಂಧ ಹೊಂದಿದ್ದರು.
ಶನಿವಾರ ನವೀನ್ ಅವರು ತಮ್ಮ ಅಂಗಡಿಯಿಂದ ಡಾ. ಸಾಧು ಚಂದ್ ಚೌಕ್ ಬಳಿಯಿರುವ ತಮ್ಮ ನಿವಾಸಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ನವೀನ್ ಮೇಲೆ ಪಾಯಿಂಟ್-ಬ್ಲಾಂಕ್ ದೂರದಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ನಂತರ ನವೀನ್‌ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಫಿರೋಜ್‌ಪುರದಲ್ಲಿ ಆರ್‌ಎಸ್‌ಎಸ್ ನಾಯಕ ಬಲದೇವ್ ರಾಜ್ ಅರೋರಾ ಅವರ ಪುತ್ರ ನವೀನ್ ಅರೋರಾ ಅವರ ಹತ್ಯೆಯು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಎಎಪಿ ಸರ್ಕಾರದ ವೈಫಲ್ಯವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಇಂದು ಪಂಜಾಬ್‌ನ ಜನರು ಭಯದ ವಾತಾವರಣದಲ್ಲಿ ಬದುಕಬೇಕಾಗಿದೆ ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನೀಲ್ ಜಾಖರ್ ಹೇಳಿದ್ದಾರೆ.
ಘಟನೆಯ ಬಳಿಕ ತಕ್ಷಣವೇ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಭೂಪಿಂದರ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ.
ಹಲ್ಲೆಕೋರರ ಗುರುತನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್‌ಎಸ್‌ಪಿ ಹೇಳಿದರು.
Advertisement