

ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪಿ ಅಮೀರ್ ರಶೀದ್ ಅಲಿಯನ್ನು ದೆಹಲಿ ನ್ಯಾಯಾಲಯ ಸೋಮವಾರ 10 ದಿನಗಳ ಎನ್ಐಎ ಕಸ್ಟಡಿಗೆ ನೀಡಿದೆ.
ಪಟಿಯಾಲ ಹೌಸ್ ನ್ಯಾಯಾಲಯದ ಸಂಕೀರ್ಣದಲ್ಲಿ ಬಿಗಿ ಭದ್ರತೆಯ ನಡುವೆ ಆರೋಪಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಮಾಧ್ಯಮದವರಿಗೆ ನ್ಯಾಯಾಲಯದೊಳಗೆ ಪ್ರವೇಶಿಸಲು ಅವಕಾಶವಿರಲಿಲ್ಲ.
'ದೆಹಲಿ ಪೊಲೀಸ್ ಮತ್ತು ಕ್ಷಿಪ್ರ ಕಾರ್ಯ ಪಡೆ (RAF) ಸಿಬ್ಬಂದಿಯನ್ನು ನ್ಯಾಯಾಲಯದ ಸಂಕೀರ್ಣ ಮತ್ತು ಸುತ್ತಮುತ್ತ ನಿಯೋಜಿಸಲಾಗಿತ್ತು' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಯಾವುದೇ ಅಹಿತಕರ ಘಟನೆಯನ್ನು ತಡೆಗಟ್ಟಲು ಗಲಭೆ ನಿಗ್ರಹ ಗೇರ್‌ಗಳನ್ನು ಹೊಂದಿರುವ ತಂಡಗಳು ಸಜ್ಜಾಗಿವೆ ಎಂದು ಹೇಳಿದರು.
ನವೆಂಬರ್ 10 ರಂದು ರಾಷ್ಟ್ರ ರಾಜಧಾನಿಯ ಕೆಂಪು ಕೋಟೆ ಬಳಿ ಸ್ಫೋಟಕಗಳಿಂದ ತುಂಬಿದ ಕಾರು ಸ್ಫೋಟಗೊಂಡ ನಂತರ 13 ಜನರು ಸಾವಿಗೀಡಾದರು ಮತ್ತು ಹಲವರು ಗಾಯಗೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ವೈದ್ಯ ಉಮರ್ ನಬಿ ಎಂಬಾತ ಆ ಕಾರನ್ನು ಚಲಾಯಿಸುತ್ತಿದ್ದ. ಹರಿಯಾಣದ ಫರಿದಾಬಾದ್‌ನಲ್ಲಿ ಭಾರಿ ಸ್ಫೋಟಕಗಳನ್ನು ವಶಪಡಿಸಿಕೊಂಡ 'ವೈಟ್ ಕಾಲರ್' ಭಯೋತ್ಪಾದಕ ಮಾಡ್ಯೂಲ್‌ನೊಂದಿಗೆ ಆತ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ.
ಅಧಿಕಾರಿಗಳ ಪ್ರಕಾರ, ಅಲಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಬಂಧಿಸಿದೆ ಮತ್ತು ಸ್ಫೋಟಗೊಂಡ ಹುಂಡೈ ಐ20 ಕಾರನ್ನು ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ.
Advertisement