

ಹೈದರಾಬಾದ್: ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಆರು ತಿಂಗಳ ಹಿಂದೆ ಎರಡು ದಿನಗಳ ಕಾಲ ವಂಚಕರು 'ಡಿಜಿಟಲ್ ಅರೆಸ್ಟ್' ಮಾಡಿದ್ದರು ಎಂದು ನಟ ನಾಗಾರ್ಜುನ ಅಕ್ಕಿನೇನಿ ಸೋಮವಾರ ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತ ವಿಸಿ ಸಜ್ಜನರ್ ಮತ್ತು ಚಿತ್ರರಂಗದ ಇತರರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗಾರ್ಜುನ, ಪೊಲೀಸರು ಮಧ್ಯಪ್ರವೇಶಿಸಿದ ನಂತರ ದುಷ್ಕರ್ಮಿಗಳು ಬೇಗನೆ ಕಣ್ಮರೆಯಾದರು ಎಂದು ಹೇಳಿದರು.
'ನನ್ನ ಮನೆಯಲ್ಲಿ ಸುಮಾರು ಆರು ತಿಂಗಳ ಹಿಂದೆ ಇದೇ ರೀತಿ ನಡೆದಿದ್ದು ನನಗೆ ನೆನಪಿದೆ. ನನ್ನ ಕುಟುಂಬದ ಸದಸ್ಯರಲ್ಲಿ ಒಬ್ಬರನ್ನು ಎರಡು ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು. ಈ ಸಂಸ್ಥೆಗಳು (ವಂಚಕರು) ನಮ್ಮನ್ನು ಪತ್ತೆಹಚ್ಚಿ, ನಮ್ಮ ದೌರ್ಬಲ್ಯಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತವೆ' ಎಂದು ತಿಳಿಸಿದರು.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದಾಗ, ಘಟನೆಯ ಬಗ್ಗೆ ನಾಗಾರ್ಜುನ ಅವರು ಯಾವುದೇ ದೂರು ದಾಖಲಿಸಿಲ್ಲ ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪೈರೇಟೆಡ್ ಚಿತ್ರಗಳನ್ನು ಪ್ರದರ್ಶಿಸುವ ಹಲವಾರು ವೆಬ್‌ಸೈಟ್‌ಗಳನ್ನು ನಡೆಸುತ್ತಿರುವ ಎಮ್ಮಾಡಿ ರವಿ ಬಂಧನದ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಸಜ್ಜನರ್ ಮಾತನಾಡುತ್ತಿದ್ದರು.
ವಂಚನೆಯ ವೆಬ್‌ಸೈಟ್‌ಗಳ ಬಗ್ಗೆ ಜನರು ಎಚ್ಚರದಿಂದಿರುವಂತೆ ಎಚ್ಚರಿಸಿದ ನಾಗಾರ್ಜುನ, ತೆಲಂಗಾಣ ಪೊಲೀಸರು 'ಆರೋಪಿಗಳನ್ನು ಬಂಧಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ'. ಪೈರೇಟೆಡ್ ವಿರುದ್ಧದ ಕ್ರಮದಿಂದ ತೆಲುಗು ಚಿತ್ರೋದ್ಯಮ ಮಾತ್ರವಲ್ಲದೆ ಇತರ ಭಾಷೆಗಳ ಚಿತ್ರಗಳಿಗೂ ಸಹ ಪ್ರಯೋಜನವಾಗುತ್ತದೆ ಎಂದು ಹೇಳಿದರು.
ಡಿಜಿಟಲ್ ಅರೆಸ್ಟ್ ಎಂಬುದು ಇತ್ತೀಚಿನ ದಿನಗಳಲ್ಲಿ ವಂಚಕರು ಬಳಸುತ್ತಿರುವ ಅತ್ಯಾಧುನಿಕ ಸೈಬರ್ ಅಪರಾಧವಾಗಿದ್ದು, ಇದರಲ್ಲಿ ವಂಚಕರು ಕಾನೂನು ಜಾರಿ ಅಧಿಕಾರಿಗಳು ಅಥವಾ ಸರ್ಕಾರದ ಸಿಬ್ಬಂದಿಯಂತೆ ನಟಿಸಿ, ಆಡಿಯೋ ಅಥವಾ ವಿಡಿಯೋ ಕರೆಗಳ ಮೂಲಕ ಸಂತ್ರಸ್ತರನ್ನು ಬೆದರಿಸಿ, ಒತ್ತೆಯಾಳಾಗಿ ಇರಿಸಿಕೊಂಡು ಹಣ ಸುಲಿಗೆ ಮಾಡುತ್ತಾರೆ.
Advertisement