

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರವು 'ವಿಷಕಾರಿ ವಾತಾವರಣ'ವನ್ನು ಸೃಷ್ಟಿಸಿದೆ. ಅದರ ಪರಿಣಾಮವಾಗಿಯೇ ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟಕ್ಕೆ ಕಾರಣವಾಯಿತು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.
ಶ್ರೀನಗರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಫ್ತಿ, ಕಾಶ್ಮೀರದ ಯುವಕರು 'ಅಪಾಯಕಾರಿ ಮಾರ್ಗವನ್ನು ಸೃಷ್ಟಿಸಿಕೊಳ್ಳಲು' ಸರ್ಕಾರವೇ ಕಾರಣ. ಕಾಶ್ಮೀರದ ಸಮಸ್ಯೆಗಳು ಈಗ ಕೆಂಪು ಕೋಟೆಯ ಮುಂದೆ ಪ್ರತಿಧ್ವನಿಸುತ್ತಿವೆ ಎಂದು ಆರೋಪಿಸಿದರು.
'ವಿಷಕಾರಿ ವಾತಾವರಣ ಸೃಷ್ಟಿಯಾಗಿದೆ ಮತ್ತು ಆ ವಾತಾವರಣವೇ ಕಾಶ್ಮೀರದ ಯುವಕರು ತಮ್ಮ ಮಾರ್ಗದಿಂದ ವಿಮುಖರಾಗಿ ತಮ್ಮದೇ ಆದ ಅಪಾಯಕಾರಿ ಮಾರ್ಗವನ್ನು ಸೃಷ್ಟಿಸಿಕೊಳ್ಳಲು ಕಾರಣವಾಗಿದೆ. ಆ ಯುವಕರು ಮಾಡುತ್ತಿರುವುದು ತಪ್ಪು ಎಂದು ನಾನು ಮತ್ತೊಮ್ಮೆ ಹೇಳುತ್ತೇನೆ. ಇಷ್ಟೊಂದು ಶಿಕ್ಷಣ ಪಡೆದ ನಂತರ ಈ ಕೆಲಸ ಮಾಡುವುದು ತಪ್ಪು. ಸರ್ಕಾರ ಕಾಶ್ಮೀರದಲ್ಲಿ ವಿನಾಶವನ್ನು ಸೃಷ್ಟಿಸಿದೆ. ಅವರು ಕಾಶ್ಮೀರದಲ್ಲಿ ದೌರ್ಜನ್ಯ ಎಸಗುತ್ತಿದ್ದಾರೆ. ಸರ್ಕಾರ ಕಾಶ್ಮೀರದಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಕೊನೆಗೊಳಿಸಬೇಕು. ಈ ಜನರು ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳುತ್ತಾರೆ. ಆದರೆ, ಕಾಶ್ಮೀರದ ಸಮಸ್ಯೆಗಳನ್ನು ದೆಹಲಿಯ ಕೆಂಪು ಕೋಟೆಯ ಮುಂದೆ ವ್ಯಕ್ತಪಡಿಸಲಾಯಿತು' ಎಂದು ಅವರು ಹೇಳಿದರು.
'ರಾಷ್ಟ್ರೀಯ ಭದ್ರತೆಗಿಂತ ವಿಭಜಕ ರಾಜಕೀಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ನೀವು ಹಿಂದೂ-ಮುಸ್ಲಿಂ ರಾಜಕೀಯ ಮಾಡುವ ಮೂಲಕ ಮತಗಳನ್ನು ಪಡೆಯಬಹುದು. ಆದರೆ, ರಾಷ್ಟ್ರವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ದೆಹಲಿಗೆ ಯಾವುದೇ ತಿಳಿವಳಿಕೆ ಇದೆಯೇ? ದೇಶವು ಕುರ್ಚಿಗಿಂತ ದೊಡ್ಡದಾಗಿದೆ' ಎಂದು ಅವರು ಹೇಳಿದರು.
ಮುಫ್ತಿ ಅವರ ಹೇಳಿಕೆಗೆ ಹಲವು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರು 'ಕೊಳಕು ರಾಜಕೀಯ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
'ಇದು ಖಂಡನೀಯ. ಅವರು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ, ಅವರು ಅಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ' ಎಂದು ಬಿಜೆಪಿ ಹಿರಿಯ ನಾಯಕ ರವೀಂದರ್ ರೈನಾ ಹೇಳಿದ್ದಾರೆ.
'ಮೆಹಬೂಬಾ ಮುಫ್ತಿ ಅವರ ಹೇಳಿಕೆ ದುರದೃಷ್ಟಕರ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ತುಂಬಾ ಕೆಳಮಟ್ಟಕ್ಕೆ ಇಳಿದಿದ್ದಾರೆ. ವಿಶೇಷವಾಗಿ ನೀವು ಜಮ್ಮು ಮತ್ತು ಕಾಶ್ಮೀರದ ಯುವಕರೊಂದಿಗೆ ನಿಲ್ಲಬೇಕಾದ ಸಮಯದಲ್ಲಿ, ಇಂತಹ ಹೇಳಿಕೆ ನೀಡುವುದು ಸರಿಯಲ್ಲ' ಎಂದು ಬಿಜೆಪಿ ನಾಯಕ ಅಭಿಜೀತ್ ಜಸ್ರೋಟಿಯಾ ಹೇಳಿದ್ದಾರೆ.
Advertisement