

ಹೈದರಾಬಾದ್: ಸೌದಿ ಅರೇಬಿಯಾದ ಮದೀನಾದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಒಟ್ಟು 45 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹೈದರಾಬಾದ್‌ನ ಒಂದೇ ಕುಟುಂಬ ಮೂರು ತಲೆಮಾರಿನ 18 ಮಂದಿಯೂ ಸಜೀವ ದಹನವಾಗಿದ್ದಾರೆ.
ಮೃತಪಟ್ಟ 18 ಮಂದಿ ಕುಟುಂಬ ಸದಸ್ಯರಲ್ಲಿ 9 ಮಕ್ಕಳೂ ಸೇರಿದ್ದಾರೆ. ನ. 9ರಂದು ಹೈದರಾಬಾದ್‌ನ ನಿವಾಸಿ, ಸೈಯದ್ ನಸೀರುದ್ದೀನ್ ಅವರು ಪತ್ನಿ, ಮಕ್ಕಳು, ಅಳಿಯಂದಿರು ಮತ್ತು ಮೊಮ್ಮಕ್ಕಳೊಂದಿಗೆ ಉಮ್ರಾ ಯಾತ್ರೆಗೆ ತೆರಳಿದ್ದರು. ಆದರೆ ಯಾತ್ರೆಯಿಂದ ವಾಪಸ್ ಆಗಲೇ ಇಲ್ಲ.
ಶನಿವಾರ ವಾಪಸ್ ಆಗಬೇಕಿತ್ತು, ಆದರೆ ಅವರು ಮರಳಲೇ ಇಲ್ಲ. ಸೈಯದ್ ಅವರ ಒಬ್ಬ ಮಗ ಅಮೆರಿಕದಲ್ಲಿರುವುದರಿಂದ ಈ ಯಾತ್ರೆಗೆ ಹೋಗಿರಲಿಲ್ಲ, ಉಳಿದಂತೆ ಬಹುತೇಕ ಕುಟುಂಬ ಹೋಗಿತ್ತು ಅವರ ಮನೆಗೆ ಬೀಗ ಹಾಕಿರುವುದು ಹಾಗೆಯೇ ಇದೆ ಎಂದು ಸೈಯದ್ ಅವರ ಸಂಬಂಧಿಕ ಮೊಹಮ್ಮದ್ ಆಸಿಫ್ ಹೇಳಿದ್ದಾರೆ.
ದುರಂತ ಸಂಭವಿಸುವ ಮೊದಲು ಅವರು ತಮ್ಮ ಸಂಬಂಧಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಆಸಿಫ್ ಹೇಳಿದರು. ಒಂದೇ ಕುಟುಂಬದ ಹದಿನೆಂಟು ಸದಸ್ಯರಲ್ಲಿ ಒಂಬತ್ತು ವಯಸ್ಕರು ಮತ್ತು ಒಂಬತ್ತು ಮಕ್ಕಳು ಸಾವನ್ನಪ್ಪಿದ್ದಾರೆ. ಇದು ನಮಗೆ ಅರಗಿಸಿಕೊಳ್ಳಲಾಗದ ಭಯಾನಕ ದುರಂತ" ಎಂದು ಅವರು ಹೇಳಿದರು.
ನಾಸಿರುದ್ದೀನ್ (70), ಅವರ ಪತ್ನಿ ಅಖ್ತರ್ ಬೇಗಂ (62), ಮಗ ಸಲಾವುದ್ದೀನ್ (42), ಹೆಣ್ಣುಮಕ್ಕಳಾದ ಅಮಿನಾ (44), ರಿಜ್ವಾನಾ (38), ಮತ್ತು ಶಬಾನಾ (40) ಮತ್ತು ಅವರ ಮಕ್ಕಳು ಎಂದು ಆಸಿಫ್ ಗುರುತಿಸಿದ್ದಾರೆ.
ಮಕ್ಕಾದಿಂದ ಮದೀನಾಕ್ಕೆ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಸಾಗಾಟದ ಟ್ಯಾಂಕರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದಿತ್ತು. ಟ್ಯಾಂಕರ್‌ಗೆ ಅಪ್ಪಳಿಸಿದ ಬಸ್‌ಗೆ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿದ್ದು, ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ.
Advertisement