

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿವಸೇನೆಯ ಸಚಿವರ ನಡುವಿನ ಘರ್ಷಣೆಯು ಬಿಜೆಪಿಗೆ ಇನ್ಮುಂದೆ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಗತ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಎನ್‌ಸಿಪಿ (ಎಸ್‌ಪಿ) ವಕ್ತಾರ ಕ್ಲೈಡ್ ಕ್ರಾಸ್ಟೊ ಬುಧವಾರ ಹೇಳಿದ್ದಾರೆ.
ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯನ್ನು ಶಿಂಧೆ ಬಣದ ಅವರ ಸಚಿವರು ಬಹಿಷ್ಕರಿಸಿದ್ದು, ಏಕನಾಥ್ ಶಿಂಧೆ ಏಕಾಂಗಿಯಾಗಿ ಭಾಗವಹಿಸಿದ್ದರು ಎಂಬ ವರದಿಗಳನ್ನು ಉಲ್ಲೇಖಿಸಿದ ಕ್ರಾಸ್ಟೊ, ಫಡ್ನವೀಸ್ ಅವರಿಗೆ ಶಿಂಧೆ ಬಗ್ಗೆ ಗೌರವವಿಲ್ಲ ಮತ್ತು ಸಚಿವರು ಸ್ವತಃ ಉಪಮುಖ್ಯಮಂತ್ರಿ ಬಗ್ಗೆ 'ಕಡಿಮೆ ಗೌರವ' ಹೊಂದಿದ್ದಾರೆ ಎಂಬುದನ್ನು ಈ ಬೆಳವಣಿಗೆಗಳು ತೋರಿಸುತ್ತವೆ ಎಂದು ಹೇಳಿದರು.
'ಏಕನಾಥ್ ಶಿಂಧೆ ಅವರಿಗೆ ಆತ್ಮಗೌರವವಿದ್ದರೆ, ಅವರು ಬಿಜೆಪಿಯೊಂದಿಗಿನ ಮೈತ್ರಿಯನ್ನು ತೊರೆಯಬೇಕು. ಸರಿಯಾದ ಸಮಯದಲ್ಲಿ ಅವರು ಹೊರನಡೆಯದಿದ್ದರೆ, ಶೀಘ್ರದಲ್ಲೇ ಅವರಿಗೆ ಬಾಗಿಲ ಕಡೆಗಿನ ಮಾರ್ಗವನ್ನು ತೋರಿಸಲಾಗುವುದು' ಎಂದು ಕ್ರಾಸ್ಟೊ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿ, ಶಿವಸೇನೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿವೆ.
'ಶಿಂಧೆ ಇನ್ನು ಮುಂದೆ ನಮಗೆ ಅಗತ್ಯವಿಲ್ಲ' ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ರವಾನಿಸಿದೆ ಎಂದು ಕ್ರಾಸ್ಟೊ ಹೇಳಿದ್ದಾರೆ.
ಶಿಂಧೆ ಹೊರತುಪಡಿಸಿ ಶಿವ ಸೇನಾ ಸಚಿವರು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯನ್ನು ಬಹಿಷ್ಕರಿಸಿದ್ದಾರೆ. ಬಿಜೆಪಿ ರಾಜ್ಯದ ಕೆಲವು ಭಾಗಗಳಲ್ಲಿ ಶಿವಸೇನೆಯ ನಾಯಕರು ಮತ್ತು ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿರುವುದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಮಹಾಯುತಿಯಲ್ಲಿ ಬಿರುಕು ಮೂಡಿಸಿದೆ ಎನ್ನಲಾಗಿದೆ.
ಫಡ್ನವೀಸ್ ಮತ್ತು ಶಿಂಧೆ ನೇತೃತ್ವದ ಶಿವಸೇನಾ ಸಚಿವರ ನಡುವಿನ ಸಭೆಯ ನಂತರ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಮಹಾಯುತಿಯು ಮಿತ್ರಪಕ್ಷಗಳ ಪರಸ್ಪರ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ತಡೆಯಬೇಕೆಂದು ನಿರ್ಧರಿಸಲಾಗಿದೆ ಎಂದು ಹೇಳಿದರು.
Advertisement