

ಮರಾಠಿ ನಟಿ ಗಿರಿಜಾ ಓಕ್ ಇತ್ತೀಚಿನ ತಮ್ಮ ಸಂದರ್ಶನದ ಮೂಲಕ ಕಳೆದ ಕೆಲವೊಂದು ದಿನಗಳಿಂದ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಆಕೆಯ ಸರಳತೆ, ಮಾತನಾಡುವ ಶೈಲಿ ಸಿನಿಮಾಗಳಿಗಿಂತ ಆಕೆಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ.
ಈಗ ಮತ್ತೆ ಆಕೆಯ ಹೇಳಿಕೆಯೊಂದು ಸುದ್ದಿಯಲ್ಲಿದೆ. ಹಲವು ವರ್ಷಗಳ ಹಿಂದೆ ತಾವು ಲೋಕಲ್ ಟ್ರೈನ್ ನಲ್ಲಿ ಎದುರಿಸಿದ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಲಲನ್ ಟಾಪ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗಿರಿಜಾ ಓಕ್, ಸ್ಥಳೀಯ ರೈಲುಗಳಲ್ಲಿ ಜನರು ನಿಮ್ಮನ್ನು ದುರುದ್ದೇಶದಿಂದ ಮುಟ್ಟಿ ಓಡಿಹೋಗುತ್ತಾರೆ, ಉದ್ದೇಶಪೂರ್ವಕವಾಗಿ ನಿಮ್ಮ ಖಾಸಗಿ ಭಾಗಗಳನ್ನು ಮುಟ್ಟುತ್ತಾರೆ. ಇದು ಸಾಮಾನ್ಯವಾಗಿ ನಡೆಯುತ್ತದೆ ಎಂಬುದು ಬೇಸರದ ಸಂಗತಿ. ಇಂತಹ ಸ್ಥಳಗಳಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು, ನನಗೂ ಇಂತಹ ಕರಾಳ ಅನುಭವ ಆಗಿತ್ತು ಎಂದು ಗಿರಿಜಾ ಓಕ್ ಹೇಳಿದ್ದಾರೆ.
ಮುಂಬೈ ನಲ್ಲಿ ಹಲವು ವರ್ಷಗಳ ಹಿಂದೆ ನಾನು ಜನದಟ್ಟಣೆ ಇದ್ದ ಸ್ಥಳೀಯ ರೈಲಿನಲ್ಲಿ ಸಂಚರಿಸುತ್ತಿದ್ದಾಗ ಒಬ್ಬ ಯುವಕ ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ, ಆತ ಎಲ್ಲಿಂದ ಬಂದ ಎನ್ನುವುದು ಗೊತ್ತಾಗಲಿಲ್ಲ. ಬಂದವನೇ ಸೀದಾ ನನ್ನ ಹಿಂದೆ ನಿಂತುಕೊಂಡ.ನನ್ನ ಕುತ್ತಿಗೆಯ ಭಾಗ, ನನ್ನ ಬೆನ್ನ ಮೇಲೆ ಕೈಯಾಡಿಸಿದ, ನನ್ನ ಸೊಂಟದ ಭಾಗ ಮತ್ತು ನನ್ನ ಪೃಷ್ಠದ ಮೇಲೆ ಕೂಡ ಆತನ ಕೈಗಳು ಹರಿದಾಡಿದವು ನಾನು ಎಚ್ಚೆತ್ತುಕೊಳ್ಳುವಷ್ಟರಲ್ಲಿ ತಕ್ಷಣವೇ ಆತ ಕಣ್ಮರೆಯಾಗಿದ್ದ, ಜನದಟ್ಟಣೆಯಲ್ಲಿ ಆತನನ್ನು ಹಿಡಿಯಲು ಆಗಲಿಲ್ಲ ಎಂದು ಗಿರಿಜಾ ಓಕ್ ಹೇಳಿದ್ದಾರೆ.
ಇಂಥಹ ಅಹಿತಕರ ಘಟನೆಗಳ ವಿರುದ್ಧ ಧ್ವನಿ ಎತ್ತುವುದಕ್ಕೆ ನನ್ನ ತಾಯಿ ನನ್ನಲ್ಲಿ ಧೈರ್ಯ ತುಂಬಿದ್ದರು. ಶಾಲೆಯ ದಿನಗಳಲ್ಲೂ ಓರ್ವ ನನ್ನನ್ನು ಪೀಡಿಸುತ್ತಿದ್ದ. ಆತನಿಗೆ ಕಪಾಳ ಮೋಕ್ಷ ಮಾಡಿದ್ದೆ. ಅಂದಿನಿಂದ ನನ್ನ ವಿರುದ್ಧದ ದೌರ್ಜನ್ಯ ಎದುರಿಸುವುದಕ್ಕೆ ಧ್ವನಿ ಎತ್ತುವುದಕ್ಕೆ ಕಲಿತೆ ಎಂದು ಹೇಳಿದ್ದಾರೆ.
ನನ್ನ ಕುಟುಂಬದಲ್ಲಿ ಇಂತಹ ಅಹಿತಕರ ಘಟನೆ, ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವುದಕ್ಕೆ ಬೆಂಬಲ ಸಿಗುತ್ತಿತ್ತು, ಪ್ರಮುಖವಾಗಿ ನನ್ನ ತಾಯಿ, ಅಜ್ಜಿ ದೌರ್ಜನ್ಯಗಳ ವಿರುದ್ಧ ಗಟ್ಟಿಯಾಗಿ ನಿಲ್ಲುವುದನ್ನು ನಮಗೆ ಕಲಿಸಿದ್ದರು. ಈ ವಿಷಯದಲ್ಲಿ ಕುಟುಂಬದ ಬೆಂಬಲ ಪಡೆದ ನಾನು ಬಹಳ ಅದೃಷ್ಟಶಾಲಿ ಎಂದು ಗಿರಿಜಾ ಓಕ್ ತಿಳಿಸಿದ್ದಾರೆ.
ಜನದಟ್ಟಣೆ ಇರುವ ಕಡೆಗಳಲ್ಲಿ ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸುವಂತಹ ಘಟನೆಗಳು ನಡೆಯುತ್ತಿರುತ್ತವೆ.ಯಾರಾದರೂ ಉದ್ದೇಶಪೂರ್ವಕವಾಗಿ ತಳ್ಳಿದರೆ, ಅಸಭ್ಯವಾಗಿ ಸ್ಪರ್ಶಿಸಿದರೆ - ನಾವೆಲ್ಲ ಜನಸಂದಣಿ ಇರುವ ಸ್ಥಳ ಎಂದುಕೊಂಡು ಸುಮ್ಮನಾಗುತ್ತೇವೆ, ಇದೆಲ್ಲ ಇದ್ದಿದ್ದೇ ಎಂದುಕೊಳ್ಳುತ್ತೇವೆ, ಆದರೆ
ನನ್ನ ತಾಯಿ ಇಂತಹ ಸ್ಥಳಗಳಲ್ಲಿ ಹೆಚ್ಚು ಜಾಗರೂಕರಾಗಿರುತ್ತಿದ್ದರು. ತಕ್ಷಣವೇ ಅಂತಹವರ ಕಾಲರ್ ಹಿಡಿದು ನಿಲ್ಲಿಸುತ್ತಿದ್ದರು ಆಕೆ ಗಟ್ಟಿಗಿತ್ತಿ. ಸಾರ್ವಜನಿಕ ಸ್ಥಳಗಳಲ್ಲಿ ಆಕೆ ಜಾಗರೂಕತೆಯಿಂದ ಇರುತ್ತಿದ್ದದ್ದು ನನಗೆ ಪ್ರೇರಣೆ ಎಂದು ಗಿರಿಜಾ ಓಕ್ ನೆನಪಿಸಿಕೊಂಡಿದ್ದಾರೆ.
Advertisement