

ನವದೆಹಲಿ: ದೆಹಲಿಯ ಕೆಂಪುಕೋಟೆ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಅಲ್ ಫಲಾಹ್ ವಿಶ್ವ ವಿದ್ಯಾಲಯ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ಅವರನ್ನು ಡಿಸೆಂಬರ್ 1ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.
ದೆಹಲಿ ಸ್ಫೋಟ ಮತ್ತು ವೈಟ್ ಕಾಲರ್ ಉಗ್ರ ಮಾಡ್ಯೂಲ್ ನ ಹಿಂದಿನ ಭಯೋತ್ಪಾದಕ ಘಟಕದ ಕೇಂದ್ರ ಬಿಂದುವಾಗಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ಮಂಗಳವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಪಡಿಸಿದ್ದರು.
ಇದೀಗ ಅಹ್ಮದ್ ಸಿದ್ದಿಕಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಡಿಸೆಂಬರ್ 1 ರವರೆಗೆ ಅಂದರೆ ಒಟ್ಟು 13 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.
ಭಯೋತ್ಪಾದನಾ ಹಣಕಾಸು ಸಂಬಂಧಿತ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ್ದ ಇಡಿ ಅಧಿಕಾರಿಗಳು ಇಂದು ಜವಾದ್ ಅಹ್ಮದ್ ಸಿದ್ದಿಕಿಯನ್ನು ಮಂಗಳವಾರ ಬಂಧಿಸಿದ್ದರು.
ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಹಲವಾರು ವೈದ್ಯರನ್ನು ಬಂಧಿಸಿದ ನಂತರ ಫರಿದಾಬಾದ್‌ನ ಧೌಜ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯವು ಪರಿಶೀಲನೆಗೆ ಒಳಪಟ್ಟಿದೆ.
15 ಜನರ ಸಾವು ಮತ್ತು ಹಲವರು ಗಾಯಗೊಳ್ಳಲು ಕಾರಣವಾಗಿದ್ದ ಈ ಸ್ಫೋಟದಲ್ಲಿ ಆತ್ಮಹತ್ಯಾ ಬಾಂಬರ್ ಆಗಿದ್ದ ಕಾಶ್ಮೀರಿ ನಿವಾಸಿ ಡಾ. ಉಮರ್ ಉನ್ ನಬಿ ಇದೇ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿದ್ದರು.
ತನಿಖೆಯ ಪರಿಣಾಮವಾಗಿ ಫರಿದಾಬಾದ್‌ನ ಎರಡು ಬಾಡಿಗೆ ಕೊಠಡಿಗಳಿಂದ ಸುಮಾರು 2,900 ಕೆಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವೈದ್ಯರು ಮತ್ತು ಫರಿದಾಬಾದ್‌ನ ಮಸೀದಿಗೆ ಸಂಬಂಧಿಸಿದ ಧರ್ಮಗುರು ಸೇರಿದಂತೆ ಹಲವಾರು ವ್ಯಕ್ತಿಗಳನ್ನು ಬಂಧಿಸಲಾಯಿತು.
ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೂಲಕ ನಡೆಸಲಾದ ನಿಧಿಯ ತಿರುವು ಮತ್ತು ಅನುಮಾನಾಸ್ಪದ ಹಣಕಾಸು ವಹಿವಾಟುಗಳು ಸೇರಿದಂತೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆರೋಪಿಸಲಾಗಿದೆ ಎಂದು ಹೇಳಲಾದ ಉಲ್ಲಂಘನೆಗಳನ್ನು ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ.
Advertisement