

ನವದೆಹಲಿ: ದೆಹಲಿಯ ಕೆಂಪುಕೋಟೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಮತ್ತೆ 4 ಪ್ರಮುಖ ಆರೋಪಿಗಳನ್ನು ಬಂಧಿಸಿದೆ.
ದೆಹಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ತನಿಖೆ ನಡೆಸಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ ನಾಲ್ಕು ಪ್ರಮುಖ ಆರೋಪಿಗಳನ್ನು ಎನ್ ಐಎ ತನ್ನ ವಶಕ್ಕೆ ಪಡೆದಿದೆ ಎನ್ನಲಾಗಿದೆ.
ಬಂಧಿತ ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದ ಡಾ. ಮುಜಮ್ಮಿಲ್ ಶಕೀಲ್ ಗನೈ, ಡಾ. ಅದೀಲ್ ಅಹ್ಮದ್ ರಾಥರ್ ಮತ್ತು ಮುಫ್ತಿ ಇರ್ಫಾನ್ ಅಹ್ಮದ್ ವಾಗೆ ಮತ್ತು ಉತ್ತರ ಪ್ರದೇಶದ ಡಾ. ಶಾಹೀನ್ ಸಯೀದ್ ಎಂದು ಗುರುತಿಸಲಾಗಿದೆ. ಈ ನಾಲ್ಕು ಆರೋಪಿಗಳ ಬಂಧನ ಸೇರಿದಂತೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಆರೋಪಿಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಪಟಿಯಾಲ ಹೌಸ್ ನ್ಯಾಯಾಲಯದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ಆದೇಶದ ಮೇರೆಗೆ ನಾಲ್ವರು ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಪೊಲೀಸರಿಂದ ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.
ಅಂತೆಯೇ ಪ್ರಕರಣದಲ್ಲಿ ಸಂಪೂರ್ಣ ಭಯೋತ್ಪಾದನಾ ಪಿತೂರಿಯನ್ನು ಬಯಲು ಮಾಡುವ ಪ್ರಯತ್ನಗಳ ಭಾಗವಾಗಿ ಈ ಹಿಂದೆ ಬಂಧಿಸಲಾದ ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಎನ್‌ಐಎ ತಿಳಿಸಿದೆ.
ದಾಳಿಯ ನಂತರ ಗೃಹ ಸಚಿವಾಲಯದಿಂದ ತನಿಖೆಯನ್ನು ಹಸ್ತಾಂತರಿಸಲಾದ ಭಯೋತ್ಪಾದನಾ ನಿಗ್ರಹ ಸಂಸ್ಥೆಯು, ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಘಟಕದ ಪ್ರತಿಯೊಬ್ಬ ಸದಸ್ಯರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ವಿವಿಧ ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.
Advertisement