

ನವದೆಹಲಿ: ದೆಹಲಿಯ ಸೇಂಟ್ ಕೊಲಂಬಸ್ ಶಾಲೆಯ ವಿದ್ಯಾರ್ಥಿಯೊಬ್ಬ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
16 ವರ್ಷದ ಶೌರ್ಯ ಪಾಟೀಲ್ ಮಂಗಳವಾರ ಆತ್ಮಹತ್ಯೆಯಿಂದ ಸಾವನ್ನಪ್ಪಿರುವ ವಿದ್ಯಾರ್ಥಿಯಾಗಿದ್ದಾನೆ. ವಿದ್ಯಾರ್ಥಿ ಶಾಲೆಯಲ್ಲಿ ಶಿಕ್ಷಕರಿಂದ ಕಿರುಕುಳ ಉಂಟಾಗುತ್ತಿದೆ ಎಂದು ಡೆತ್ ನೋಟ್ ನಲ್ಲಿ ಬರೆದಿರುವುದು ಬಹಿರಂಗವಾಗಿದೆ. ತಂದೆ-ತಾಯಿಯನ್ನುದ್ದೇಶಿಸಿ ಬರೆದ ಪತ್ರದಲ್ಲಿ, " ಅಮ್ಮ, ಕ್ಷಮಿಸಿ , ನಾನು ನಿಮ್ಮ ಹೃದಯವನ್ನು ಹಲವು ಬಾರಿ ಮುರಿದಿದ್ದೇನೆ ಮತ್ತು ನಾನು ಕೊನೆಯ ಬಾರಿಗೆ ಅದನ್ನು ಮಾಡುತ್ತಿದ್ದೇನೆ. ಶಾಲೆಯಲ್ಲಿ ಶಿಕ್ಷಕರು ಹೀಗೇ ಇದ್ದಾರೆ, ನಾನು ಏನು ಹೇಳಲಿ?). ಎಂದು ತನಗಾಗುತ್ತಿರುವ ಕಿರುಕುಳದ ಬಗ್ಗೆ ಹೇಳಿದ್ದಾನೆ.
ಘಟನೆ ನಡೆದ ಎರಡು ದಿನಗಳ ನಂತರ, ಶಾಲಾ ಅಧಿಕಾರಿಗಳು ಮುಖ್ಯೋಪಾಧ್ಯಾಯರು ಮತ್ತು ಮೂವರು ಶಿಕ್ಷಕರನ್ನು ಅಮಾನತುಗೊಳಿಸಿದ್ದಾರೆ, ಅವರನ್ನು ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ಪ್ರಥಮ ಮಾಹಿತಿ ವರದಿಯಲ್ಲಿ ಹೆಸರಿಸಲಾಗಿದೆ.
ಬುಧವಾರ ಸಲ್ಲಿಸಲಾದ ದೂರಿನಲ್ಲಿ, ಬಾಲಕನ ತಂದೆ ಪ್ರದೀಪ್ ಪಾಟೀಲ್, ಶಾಲೆಯ 5 ರಿಂದ 10 ನೇ ತರಗತಿಯ ಮುಖ್ಯೋಪಾಧ್ಯಾಯರಾದ ಅಪರಾಜಿತಾ ಪಾಲ್ ಮತ್ತು ಶಿಕ್ಷಕಿಯರಾದ ಜೂಲಿ ವರ್ಗೀಸ್, ಮನು ಕಲ್ರಾ ಮತ್ತು ಯುಕ್ತಿ ಅಗರ್ವಾಲ್ ಮಹಾಜನ್ ಅವರನ್ನು ಹೆಸರಿಸಿ, ಅವರು ತಮ್ಮ ಮಗನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ.
ಅಮಾನತು ಆದೇಶದಲ್ಲಿ ಶಾಲೆಯ ಪ್ರಾಂಶುಪಾಲರಾದ ರಾಬರ್ಟ್ ಫೆರ್ನಾಂಡಿಸ್ ಮುಂದಿನ ಸೂಚನೆ ಬರುವವರೆಗೆ ಅಮಾನತು ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ. ಯಾವುದೇ ತನಿಖೆಗೆ ಲಭ್ಯವಿರುವಂತೆ ಮತ್ತು ಅನುಮತಿಯಿಲ್ಲದೆ ಶಾಲೆಗೆ ಭೇಟಿ ನೀಡಲು ಅಥವಾ ವಿದ್ಯಾರ್ಥಿಗಳು, ಸಿಬ್ಬಂದಿ ಅಥವಾ ಪೋಷಕರೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ಅಮಾನತು ಪತ್ರ ಆರೋಪಿ ಶಿಕ್ಷಕರಿಗೆ ಸೂಚನೆ ನೀಡಿದೆ.
Advertisement