

ನವದೆಹಲಿ: 2020 ರ ದೆಹಲಿ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ಜಾಮೀನು ಅರ್ಜಿಗಳನ್ನು ಪರಿಗಣಿಸದಂತೆ ದೆಹಲಿ ಪೊಲೀಸರು ಸುಪ್ರೀಂಕೋರ್ಟ್ ನಲ್ಲಿ ಗುರುವಾರ ಮನವಿ ಮಾಡಿದರು. ಇದಕ್ಕೆ ಇತ್ತೀಚಿನ ಕೆಂಪು ಕೋಟೆ ಸ್ಫೋಟ ಪ್ರಕರಣ ಮತ್ತು ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್ ಪತ್ತೆಯನ್ನು ಉಲ್ಲೇಖಿಸಿದರು.
ದೆಹಲಿ ಪೊಲೀಸರ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಸರ್ಕಾರದ ಹಣ ಬಳಸಿಕೊಂಡು ವೈದ್ಯರು ಮತ್ತು ಎಂಜಿನಿಯರ್‌ಗಳಾದ ಬುದ್ದಿಜೀವಿಗಳು ನಂತರ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದರು.
ಸಾಮಾಜಿಕ ಕಾರ್ಯಕರ್ತರ ಜಾಮೀನು ಅರ್ಜಿಗಳಿಗೆ ಬಲವಾಗಿ ವಿರೋಧಿಸಿದ ASG, ಬುದ್ಧಿಜೀವಿಗಳು ಭಯೋತ್ಪಾದಕರಾದಾಗ, ಅವರು ನೆಲದ ಮೇಲೆ ಕಾರ್ಯನಿರ್ವಹಿಸುವವರಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಾರೆ ಎಂದು ಹೇಳಿದರು.
ಬುದ್ಧಿಜೀವಿಗಳು ವೈದ್ಯರಾಗಲು ರಾಜ್ಯದ ಹಣವನ್ನು ಬಳಸುತ್ತಾರೆ. ನಂತರ, ಅವರು ದುಷ್ಕೃತ್ಯ ಮಾಡುತ್ತಾರೆ. ಅವರು ಹೆಚ್ಚು ಅಪಾಯಕಾರಿ ಎಂದು ಎಎಸ್‌ಜಿ ರಾಜು ಹೇಳಿದರು. ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೈಶ್-ಎ-ಮೊಹಮ್ಮದ್ ಬೆಂಬಲಿತ ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್ ಅನ್ನು ಭದ್ರತಾ ಸಂಸ್ಥೆಗಳು ಪತ್ತೆ ಹಚ್ಚಿದ ಬೆನ್ನಲ್ಲೇ ಈ ಹೇಳಿಕೆಗಳು ಬಂದಿವೆ.
ಈ ತಿಂಗಳ ಆರಂಭದಲ್ಲಿ ವೈದ್ಯರೊಬ್ಬರ ನಿವಾಸದಿಂದ ಸುಮಾರು 2,900 ಕಿಲೋಗ್ರಾಂಗಳಷ್ಟು ಐಇಡಿ ಸ್ಪೋಟಕ ತಯಾರಿಸುವ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಮಾರನೇ ದಿನ ಅವರ ಸಹಚರ ಡಾ. ಉಮರ್ ನಬಿ, ಐತಿಹಾಸಿಕ ಕೆಂಪು ಕೋಟೆಯ ಹೊರಗೆ ಕಾರನ್ನು ಸ್ಫೋಟಿಸಿ 14 ಜನರನ್ನು ಕೊಂದರು. ಅಂದಿನಿಂದ, ಹಲವಾರು ವೈದ್ಯರನ್ನು ಬಂಧಿಸಲಾಗಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್‌ವಿ ಅಂಜಾರಿಯಾ ಅವರ ಪೀಠವು ಇಮಾಮ್, ಖಾಲಿದ್ ಮತ್ತು ಇತರ ಮೂವರ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವಾಗ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಯ ವಿರುದ್ಧ ನಡೆದ ಕೋಮು ಗಲಭೆಗೆ ಕಾರಣವಾದ ಸಂಚಿನ ಆರೋಪದ ಮೇಲೆ ಇಮಾಮ್ ಮತ್ತು ಖಾಲಿದ್ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು UAPA ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
Advertisement