

ಪಾಟ್ನಾ: 34 ವರ್ಷದ ಶ್ರೇಯಸಿ ಸಿಂಗ್, ಒಲಿಂಪಿಯನ್ ಶೂಟರ್ ಮತ್ತು ಭಾರತದ ಪ್ರಮುಖ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರು, ಸದ್ಯ ಅವರು ನಿತೀಶ್ ಕುಮಾರ್ ಸಂಪುಟದಲ್ಲಿ ಅತ್ಯಂತ ಕಿರಿಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಜಮುಯಿಯಿಂದ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾದ ಅವರು ತಮ್ಮ ಕ್ರೀಡಾ ಪ್ರಶಸ್ತಿಗಳು ಮತ್ತು ರಾಜಕೀಯ ಚತುರತೆ ಎರಡನ್ನೂ ಒಟ್ಟುಗೂಡಿಸಿಕೊಂಡು ಬಿಹಾರ ಸರ್ಕಾರದ ಸಂಪುಟ ಸೇರುತ್ತಿದ್ದಾರೆ.
ಮಾಜಿ ಕೇಂದ್ರ ಸಚಿವರಾಗಿದ್ದ ದಿವಂಗತ ದಿಗ್ವಿಜಯ್ ಸಿಂಗ್ ಮತ್ತು ಮಾಜಿ ಸಂಸದೆ ಪುತುಲ್ ಕುಮಾರಿ ಅವರ ಕಿರಿಯ ಮಗಳು. ಶ್ರೇಯಸಿ ಸಿಂಗ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಬಹಳ ಹಿಂದೆಯೇ, ಅವರು ಅಂತರರಾಷ್ಟ್ರೀಯ ವೇದಿಕೆಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು.
ಹಲವು ಕ್ರೀಡಾ ಕೂಟಗಳಲ್ಲಿ ವಿವಿಧ ಪ್ರಶಸ್ತಿ ಪಡೆಯುವ ಮೂಲದ ದೇಶದ ಕೀರ್ತಿ ಪತಾಕೆ ಹಾರಿಸಿರುವ ಶೂಟರ್‌ಗಳಲ್ಲಿ ಒಬ್ಬರಾದ ಶ್ರೇಯಸಿ ಅವರ ಕ್ರೀಡಾ ಜೀವನದಲ್ಲಿ ಹಲವು ಮೈಲಿಗಲ್ಲುಗಳಿವೆ: 2018 ರ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಡಬಲ್ ಟ್ರಾಪ್‌ನಲ್ಲಿ ಚಿನ್ನ, 2014 ರಲ್ಲಿ ಗ್ಲಾಸ್ಗೋದಲ್ಲಿ ಬೆಳ್ಳಿ ಮತ್ತು ಅದೇ ವರ್ಷ ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
61ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಬಿಹಾರದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಅವರ ಕಪಾಟನ್ನು ಅಲಂಕರಿಸಿರುವ ಅರ್ಜುನ ಪ್ರಶಸ್ತಿಯು ಅವರ ಸಾಧನೆಗಳಿಗೆ ಸಿಕ್ಕ ಪ್ರತಿಫಲವಾಗಿದೆ.
ಪ್ರಮಾಣವಚನ ಸ್ವೀಕರಿಸಿದ ನಂತರ, ಅವರು ತಮ್ಮ ಮತದಾರರಿಗೆ ಧನ್ಯವಾದ ಅರ್ಪಿಸಿದರು, ಜೊತೆಗೆ ತಮ್ಮ ಕ್ಷೇತ್ರದ ಜನರಿಗಾಗಿ ಹೆಚ್ಚು ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದರು. ಮಾನವ್ ರಚನಾ ಅಂತರರಾಷ್ಟ್ರೀಯ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯಿಂದ ಎಂಬಿಎ ಪದವಿ ಪಡೆದ ಅವರ ಬಳಿ, 7.6 ಕೋಟಿ ರೂ. ಆಸ್ತಿ, 13.3 ಲಕ್ಷ ರೂ. ಮತ್ತು 94.2 ಲಕ್ಷ ರೂ. ವಾರ್ಷಿಕ ಆದಾಯವಿದೆ ಎಂದು ಘೋಷಿಸಿದ್ದಾರೆ. ಅವರಿಗೆ ಕ್ರೀಡಾ ಖಾತೆ ದೊರೆಯುವ ಸಾಧ್ಯತೆಯಿದೆ.
Advertisement