

ಪಾಟ್ನಾ: ನಿತೀಶ್ ಕುಮಾರ್ ಸರ್ಕಾರದ ಹೊಸ ಸಚಿವ ಸಂಪುಟವು ಭ್ರಷ್ಟರು ಮತ್ತು ಕ್ರಿಮಿನಲ್ ನಾಯಕರಿಂದ ತುಂಬಿದೆ ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.
ಪಶ್ಚಿಮ ಚಂಪಾರಣ್‌ನ ಗಾಂಧಿ ಆಶ್ರಮದಲ್ಲಿ ಒಂದು ದಿನದ ಮೌನ ಉಪವಾಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಿಶೋರ್, ಜನವರಿ 15 ರಂದು ತಮ್ಮ ಪಕ್ಷ 'ಬಿಹಾರ ನವನಿರ್ಮಾಣ ಸಂಕಲ್ಪ ಯಾತ್ರೆ' ಪ್ರಾರಂಭಿಸಲಿದೆ, ಈ ಸಂದರ್ಭದಲ್ಲಿ ಜನ ಸುರಾಜ್ ಪಕ್ಷದ ಕಾರ್ಯಕರ್ತರು ರಾಜ್ಯದ ಎಲ್ಲಾ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.
ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರ ಹೊಸ ಸಚಿವ ಸಂಪುಟವು ಭ್ರಷ್ಟರು ಮತ್ತು ಅಪರಾಧಿಗಳಿಂದ ತುಂಬಿದೆ. ಹಲವಾರು ಭ್ರಷ್ಟ ನಾಯಕರನ್ನು ಸೇರಿಸಿಕೊಂಡಿರುವುದು ಬಿಹಾರ ಜನತೆಯ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ನಿತೀಶ್ ಕುಮಾರ್ ಅವರಿಗೆ ಬಿಹಾರದ ಮೇಲೆ ಎಷ್ಟು ಕಾಳಜಿ ಇದೆ ಎಂಬುದಕ್ಕೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವ ನಾಯಕರಿಂದಲೇ ತಿಳಿಯುತ್ತಿದೆ ಎಂದು ಲೇವಡಿ ಮಾಡಿದ್ದಾರೆ. 1 ಕೋಟಿಗೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗೆ 10,000 ರೂ.ಗಳನ್ನು ವರ್ಗಾಯಿಸುವ ಮೂಲಕ ಮತಗಳನ್ನು ಖರೀದಿಸಿದ್ದಾರೆ. ಈಗ ಅವರಿಗೆ ರಾಜ್ಯ ಅಥವಾ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
Advertisement