

ಚೆನ್ನೈ: ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಶುಕ್ರವಾರ ಸಂಸ್ಕೃತವನ್ನು 'ಸತ್ತ ಭಾಷೆ' ಎಂದು ಕರೆದಿದ್ದಾರೆ. ಇದಕ್ಕೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಯಾವುದೇ ನಾಯಕರು ಹೇಳಿಕೆ ನೀಡುವಾಗ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದಿದೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಡಿಎಂಕೆ ನಾಯಕ, ತಮಿಳು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೇವಲ 150 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಇದಕ್ಕೆ ವ್ಯತಿರಿಕ್ತವಾಗಿ, 'ಸತ್ತ ಭಾಷೆ'ಯಾದ ಸಂಸ್ಕೃತಕ್ಕೆ 2,400 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ ಎಂದು ಟೀಕಿಸಿದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್, ಯಾವುದೇ ಭಾಷೆಯನ್ನು ಸತ್ತದ್ದು ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ. ವಿಶೇಷವಾಗಿ ದೇಶದಾದ್ಯಂತ ಪ್ರಾರ್ಥನೆ ಮತ್ತು ಆಚರಣೆಗಳಲ್ಲಿ ಇಂದಿಗೂ ಬಳಸಲಾಗುವ ಭಾಷೆಯನ್ನು ಹಾಗೆ ಕರೆಯುವಂತಿಲ್ಲ ಎಂದರು.
'ಒಂದು ಭಾಷೆಯನ್ನು ಮೆಚ್ಚುವ ಮೂಲಕ ಇನ್ನೊಂದು ಭಾಷೆಯನ್ನು ಅವಮಾನಿಸುವ ಈ ಮನಸ್ಥಿತಿ ಮೂಲಭೂತವಾಗಿ ತಪ್ಪು. ನಾಯಕರು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುವಾಗ ಹೆಚ್ಚು ಜವಾಬ್ದಾರಿಯುತವಾಗಿರಬೇಕು' ಎಂದು ಅವರು ಹೇಳಿದರು.
'ತಮಿಳು ಮುಕ್ತ ಹೃದಯದ ಭಾಷೆಯಾಗಿದ್ದು, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳಿಂದ ಪದಗಳು ಮತ್ತು ವಿಚಾರಗಳನ್ನು ಎರವಲು ಪಡೆದಿದೆ. ಇದು ಅದರ ಶಕ್ತಿಯನ್ನು ತೋರಿಸುತ್ತದೆ, ಅದರ ದೌರ್ಬಲ್ಯವಲ್ಲ' ಎಂದು ಅವರು ಹೇಳಿದರು.
Advertisement