

ನವದೆಹಲಿ: ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನೊಳಗೆ ವಿದ್ಯುತ್ ಕೆಟಲ್ ಬಳಸಿ ಇನ್ಸ್ಟೆಂಟ್ ನೂಡಲ್ಸ್ ಬೇಯಿಸಿದ ಮಹಿಳಾ ಪ್ರಯಾಣಕಿಯ ವಿಡಿಯೋ ವೈರಲ್ ಆಗಿದ್ದು, ಸುರಕ್ಷತಾ ಕಳವಳಗಳನ್ನು ಹುಟ್ಟುಹಾಕಿದ ನಂತರ ಕೇಂದ್ರ ರೈಲ್ವೆಯು ಆ ಮಹಿಳೆಯನ್ನು ಪತ್ತೆಹಚ್ಚಲು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ಮಹಿಳಾ ಪ್ರಯಾಣಕಿಯನ್ನು ಗುರುತಿಸಲಾಗಿದೆ ಮತ್ತು ಅವರನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ರೈಲ್ವೆ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ರೈಲ್ವೆ ಕಾಯ್ದೆಯ ಸೆಕ್ಷನ್ 147(1) ರ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ವಿಡಿಯೋದಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗೆ ವಿದ್ಯುತ್ ಕೆಟಲ್ ಅನ್ನು ಪ್ಲಗ್ ಮಾಡಿ, ನೂಡಲ್ಸ್ ಬೇಯಿಸಲಾಗಿದೆ. ಮರಾಠಿಯಲ್ಲಿ ಮಾತನಾಡುವ ಮಹಿಳೆ, ಅದೇ ವಿಧಾನವನ್ನು ಬಳಸಿಕೊಂಡು 10-15 ಜನರಿಗೆ ಚಹಾ ತಯಾರಿಸಿರುವುದಾಗಿ ಹೇಳಿದ್ದಾರೆ.
ವ್ಯಾಪಕವಾಗಿ ಪ್ರಸಾರವಾದ ಈ ವಿಡಿಯೋ ಪ್ರಯಾಣಿಕರ ಸುರಕ್ಷತೆ ಮತ್ತು ಸಂಭಾವ್ಯ ಅಗ್ನಿ ಅವಘಡದ ಅಪಾಯಗಳ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಕ್ಲಿಪ್ ಅನ್ನು ಪೋಸ್ಟ್ ಮಾಡಿದ ಚಾನೆಲ್ ಮತ್ತು ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸೆಂಟ್ರಲ್ ರೈಲ್ವೆ ತಿಳಿಸಿದೆ.
"ರೈಲುಗಳ ಒಳಗೆ ಎಲೆಕ್ಟ್ರಾನಿಕ್ ಕೆಟಲ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದು ಅಸುರಕ್ಷಿತ, ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ಇದು ಅಗ್ನಿ ಅವಘಡಕ್ಕೆ ಕಾರಣವಾಗಬಹುದು ಮತ್ತು ಇತರ ಪ್ರಯಾಣಿಕರಿಗೂ ಹಾನಿಕಾರಕವಾಗಬಹುದು. ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಮತ್ತು ರೈಲಿನಲ್ಲಿರುವ ಎಸಿ ಮತ್ತು ಇತರ ಎಲೆಕ್ಟ್ರಾನಿಕ್ ಪೋರ್ಟ್‌ಗಳ ಅಸಮರ್ಪಕ ಕಾರ್ಯಕ್ಕೂ ಕಾರಣವಾಗಬಹುದು" ಎಂದು ಸೆಂಟ್ರಲ್ ರೈಲ್ವೆ X ನಲ್ಲಿ ತಿಳಿಸಿದೆ.
Advertisement