

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮೇ 2025 ರಲ್ಲಿ ಭಾರತದೊಂದಿಗೆ ನಡೆದ ನಾಲ್ಕು ದಿನಗಳ ಸಂಘರ್ಷದಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿತು ಮತ್ತು ಚೀನಾ ತನ್ನ ಶಸ್ತ್ರಾಸ್ತ್ರಗಳ ಅತ್ಯಾಧುನಿಕತೆಯನ್ನು ಪರೀಕ್ಷಿಸಲು ಮತ್ತು ಜಾಹೀರಾತು ಮಾಡಲು ಸಂಘರ್ಷವನ್ನು 'ಅವಕಾಶವನ್ನಾಗಿ' ಬಳಸಿಕೊಂಡಿತು ಎಂದು ಅಮೆರಿಕದ ಆಯೋಗವೊಂದು ಹೊಸ ವರದಿ ಪ್ರಕಟಿಸಿದೆ.
ಫ್ರೆಂಚ್ ರಫೇಲ್ ವಿಮಾನವನ್ನು ದುರ್ಬಲಗೊಳಿಸಲು ಮತ್ತು ತನ್ನದೇ ಆದ J-35 ಯುದ್ಧವಿಮಾನಗಳನ್ನು ಪ್ರಚಾರ ಮಾಡಲು ಚೀನಾ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು AI- ರಚಿತ ಚಿತ್ರಗಳನ್ನು ಬಳಸಿಕೊಂಡು ತಪ್ಪು ಮಾಹಿತಿ ಅಭಿಯಾನವನ್ನು ಪ್ರಾರಂಭಿಸಿತು ಎಂದು 'ಯುಎಸ್-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ' (ಯುಎಸ್‌ಸಿಸಿ) ವರದಿ ಹೇಳಿದೆ.
"ಆಪರೇಷನ್ ಸಿಂಧೂರ್ ಅವಧಿಯ ನಾಲ್ಕು ದಿನಗಳ ಘರ್ಷಣೆಯಲ್ಲಿ ಭಾರತದ ಮೇಲೆ ಪಾಕಿಸ್ತಾನದ ಮಿಲಿಟರಿ ಯಶಸ್ಸು ಚೀನಾದ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿತು" ಎಂದು ಯುಎಸ್ ಕಾಂಗ್ರೆಸ್‌ಗೆ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.
2025 ರ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ 'ಆಪರೇಷನ್ ಸಿಂಧೂರ್' - ನಿಖರವಾದ ದಾಳಿಗಳನ್ನು ಪ್ರಾರಂಭಿಸಿತು.
ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಜನಪ್ರಿಯ ಪ್ರವಾಸಿ ತಾಣವಾದ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಸಂದರ್ಶಕರ ಮೇಲೆ ಗುಂಡು ಹಾರಿಸಿದ್ದರ ಪರಿಣಾಮ 26 ನಾಗರಿಕರು, ಪ್ರವಾಸಿಗರು ಸಾವನ್ನಪ್ಪಿದ್ದರು.
ಸಂಘರ್ಷದ ಬಗ್ಗೆ ಭಾರತದ ನಿಲುವಿಗೆ USCC ಹೇಳಿಕೆ ವಿರುದ್ಧವಾಗಿದೆ. "ಆಪರೇಷನ್ ಸಿಂಧೂರ್" ಸಮಯದಲ್ಲಿ ಭಾರತ ತನ್ನ ಸಾಮರ್ಥ್ಯಗಳನ್ನು ಪ್ರದರ್ಶಿಸಿದೆ ಮತ್ತು ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವನ್ನು ಮಂಡಿಯೂರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಹೇಳಿದ್ದಾರೆ.
"ಈ ಸಂಘರ್ಷವನ್ನು 'ಪ್ರಾಕ್ಸಿ ಯುದ್ಧ' ಎಂದು ನಿರೂಪಿಸುವುದರಿಂದ ಚೀನಾದ ಪ್ರಚೋದಕ ಪಾತ್ರವನ್ನು ಹೇಳಬಹುದಾಗಿದೆ. ಬೀಜಿಂಗ್ ಅವಕಾಶವಾದಿಯಾಗಿ ತನ್ನ ಶಸ್ತ್ರಾಸ್ತ್ರಗಳ ಅತ್ಯಾಧುನಿಕತೆಯನ್ನು ಪರೀಕ್ಷಿಸಲು ಮತ್ತು ಜಾಹೀರಾತು ಮಾಡಲು ಸಂಘರ್ಷವನ್ನು ಬಳಸಿಕೊಂಡಿತು ಎಂದು ವರದಿ ಹೇಳಿದೆ.
ಎರಡು ನೆರೆಯ ರಾಷ್ಟ್ರಗಳ ನಡುವಿನ ನಾಲ್ಕು ದಿನಗಳ ಸಂಘರ್ಷವನ್ನು ಕೊನೆಗೊಳಿಸಿದ ಕದನ ವಿರಾಮ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸುವ ಬಗ್ಗೆ ತಮ್ಮ ಹೇಳಿಕೆಗಳನ್ನು ಪುನರುಚ್ಚರಿಸುತ್ತಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಖಂಡನೆಗಳನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವ ಸಮಯದಲ್ಲಿ USCC ತನ್ನ ವರದಿಯಲ್ಲಿ ಭಾರತ-ಪಾಕಿಸ್ತಾನ ಸಂಘರ್ಷದ ಉಲ್ಲೇಖಿಸಿರುವುದು ಮಹತ್ವ ಪಡೆದುಕೊಂಡಿದೆ.
USCC ಎಂದೂ ಕರೆಯಲ್ಪಡುವ US-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ 2000 ರಲ್ಲಿ ಯುಎಸ್ ಕಾಂಗ್ರೆಸ್ ಸ್ಥಾಪಿಸಿದ ಸ್ವತಂತ್ರ, ದ್ವಿಪಕ್ಷೀಯ ಆಯೋಗವಾಗಿದೆ. ಚೀನಾದೊಂದಿಗಿನ ಯುನೈಟೆಡ್ ಸ್ಟೇಟ್ಸ್‌ನ ವ್ಯಾಪಾರ ಮತ್ತು ಆರ್ಥಿಕ ಸಂಬಂಧದ ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಪರಿಣಾಮಗಳ ಮೇಲ್ವಿಚಾರಣೆ ಮತ್ತು ವರದಿ ಮಾಡುವ ಕಾರ್ಯವನ್ನು ಆಯೋಗ ಹೊಂದಿದೆ.
ತನ್ನ ವರದಿಯಲ್ಲಿ USCC ಪಹಲ್ಗಾಮ್ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಗುರುತಿಸುವ ಬದಲು, ಅದನ್ನು ಭಾರತದಲ್ಲೇ ಇದ್ದ ಬಂಡುಕೋರರ ದಾಳಿ ಎಂದು ಹೇಳಿದೆ. ಅಷ್ಟೇ ಅಲ್ಲದೇ 26 ನಾಗರಿಕರನ್ನು ಕೊಂದ ಮಾರಕ ದಂಗೆಕೋರ ದಾಳಿಗೆ ಭಾರತ ನೀಡಿದ ಪ್ರತಿಕ್ರಿಯೆಯಿಂದ ಭಾರತವೇ ಸಂಘರ್ಷವನ್ನು ಪಾಕ್ ವಿರುದ್ಧ ಪ್ರಚೋದಿಸಿದೆ" ಎಂದು ಹೇಳಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು "ದಂಗೆಕೋರ ದಾಳಿ" ಎಂದು ವರದಿಯಲ್ಲಿ ವಿವರಿಸಲಾಗಿದೆ ಮತ್ತು ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದ ಮೇಲೆ ಪಾಕಿಸ್ತಾನದ ಯಶಸ್ಸಿನ ಬಗ್ಗೆ ಸುಳಿವು ನೀಡಲಾಗಿರುವುದರಿಂದ, ಯುಎಸ್‌ಸಿಸಿ ರಾಜತಾಂತ್ರಿಕತೆಗೆ "ತೀವ್ರ ಹಿನ್ನಡೆ" ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ.
Advertisement