NDA ಸರ್ಕಾರಕ್ಕೆ Asaduddin Owaisi ಬೆಂಬಲ; ಆದರೆ...
ಪಾಟ್ನ: ಬಿಹಾರದಲ್ಲಿ ಎನ್ ಡಿಎ ಸರ್ಕಾರಕ್ಕೆ ಬೆಂಬಲ ಘೋಷಿಸುವ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಘೋಷಿಸುವ ಬಗ್ಗೆ ಮಾತನಾಡಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಬೆಂಬಲ ಘೋಷಿಸುವುದಕ್ಕೆ ಷರತ್ತು ವಿಧಿಸಿರುವ ಒವೈಸಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಸ್ಲಿಂ ಪ್ರಾಬಲ್ಯದ ಸೀಮಾಂಚಲ ಪ್ರದೇಶಕ್ಕೆ ನ್ಯಾಯ ಒದಗಿಸಿ, ಕೋಮುವಾದವನ್ನು ದೂರವಿಟ್ಟರೆ ಬಿಹಾರದ ಎನ್‌ಡಿಎ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಹೈದರಾಬಾದ್ ಸಂಸದರೂ ಆಗಿರುವ ಒವೈಸಿ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂನ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ ಬಿಹಾರದ ಈಶಾನ್ಯ ಪ್ರದೇಶವಾದ ಸೀಮಾಂಚಲಕ್ಕೆ ಎರಡು ದಿನಗಳ ಪ್ರವಾಸದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
"ಪಾಟ್ನಾದಲ್ಲಿ ರಚನೆಯಾದ ಹೊಸ ಸರ್ಕಾರಕ್ಕೆ ನಾವು ಶುಭ ಹಾರೈಸುತ್ತೇವೆ. ಸೀಮಾಂಚಲ ಪ್ರದೇಶಕ್ಕೆ ನ್ಯಾಯ ಒದಗಿಸಿದರೆ ಮತ್ತು ಕೋಮುವಾದವನ್ನು ದೂರವಿಟ್ಟರೆ ನಾವು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಬಹುದು" ಎಂದು ಓವೈಸಿ ಹೇಳಿದ್ದಾರೆ.
ಆಡಳಿತಾರೂಢ ಎನ್‌ಡಿಎಯ ಅತಿದೊಡ್ಡ ಪಾಲುದಾರನಾಗಿರುವ ಬಿಜೆಪಿ, ಸೀಮಾಂಚಲದಲ್ಲಿ ಒಳನುಸುಳುವಿಕೆ ವ್ಯಾಪಕವಾಗಿದೆ, ಇದು ಈ ಪ್ರದೇಶದಲ್ಲಿ ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸುತ್ತಿದೆ.
"ಎಐಎಂಐಎಂ ಕೇವಲ ಮುಸ್ಲಿಮರಿಗಾಗಿ ಮಾತ್ರವಲ್ಲ, ದಲಿತರು ಮತ್ತು ಬುಡಕಟ್ಟು ಜನಾಂಗದವರು ಹೆಚ್ಚಿರುವ ಸೀಮಾಂಚಲದಲ್ಲಿ ವಾಸಿಸುವ ಎಲ್ಲಾ ಜನರಿಗಾಗಿಯೂ ಹೋರಾಡುತ್ತಿದೆ. ಹೊಸ ಸರ್ಕಾರ ಪಾಟ್ನಾ ಮತ್ತು ರಾಜಗೀರ್ ಬಗ್ಗೆ ಗೀಳನ್ನು ಹೊಂದಿರದೆ, ಈ ನಿರ್ಲಕ್ಷಿತ ಪ್ರದೇಶದ ಬಗ್ಗೆ ಸ್ವಲ್ಪ ಗಮನ ಹರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಓವೈಸಿ ಹೇಳಿದರು.
ರಾಜಗೀರ್ ನಳಂದ ಜಿಲ್ಲೆಯ ಪ್ರಸಿದ್ಧ ಬೌದ್ಧ ಯಾತ್ರಾ ಸ್ಥಳವಾಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಪ್ರಾಂತ್ಯದವರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮತ್ತು ಚಲನಚಿತ್ರ ನಗರ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಈ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ.


