

ನವದೆಹಲಿ: ಅರುಣಾಚಾಲ ಪ್ರದೇಶ ಚೀನಾದ ಭಾಗವೆಂದು ಹೇಳಿ ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಭಾರತೀಯ ಮಹಿಳೆಯೊಬ್ಬರಿಗೆ ವಲಸೆ ಅಧಿಕಾರಿಗಳು ಕಿರುಕುಳ ನೀಡಿರುವ ಘಟನೆ ನಡೆದಿದೆ. ಅರುಣಾಚಲ ಪ್ರದೇಶದ ಭಾರತೀಯ ಮಹಿಳೆಯೊಬ್ಬರಿಗೆ ಭಾರತೀಯ ಪಾಸ್‌ಪೋರ್ಟ್ ಗೆ ಮಾನ್ಯತೆ ನೀಡಲು ನಿರಾಕರಿಸಿದ ನಂತರ ಗಂಟೆಗಳ ಕಾಲ ವಶಕ್ಕೆ ಪಡೆದು, ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಂದಹಾಗೆ, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸಿಸುವ ಪ್ರೇಮಾ ವಾಂಗ್‌ಜೋಮ್ ಥೋಂಗ್‌ಡಾಕ್ ನವೆಂಬರ್ 21 ರಂದು ಲಂಡನ್‌ನಿಂದ ಜಪಾನ್‌ಗೆ ಪ್ರಯಾಣಿಸುತ್ತಿದ್ದಾಗ ಶಾಂಘೈನ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ. ಆಗ ವಲಸೆ ಕೌಂಟರ್‌ನಲ್ಲಿ ಅಧಿಕಾರಿಗಳು ಅವರ ಪಾಸ್‌ಪೋರ್ಟ್ ಅನ್ನು 'ಅಮಾನ್ಯ' ಎಂದು ಘೋಷಿಸಿದ್ದಾರೆ. ಅದರಲ್ಲಿ ಅರುಣಾಚಲ ಪ್ರದೇಶ ತನ್ನ ಜನ್ಮ ಸ್ಥಳ ಎಂದು ಹೇಳಿದ್ದೆ ಇದಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಅರುಣಾಚಲ ಪ್ರದೇಶ ಚೀನಾದ ಭಾಗವಾಗಿದೆ ಎಂದು ಹೇಳಿರುವುದಾಗಿ ಅವರು ಆರೋಪಿಸಿದ್ದಾರೆ.
ಕಳೆದ ವರ್ಷ ಯಾವುದೇ ಸಮಸ್ಯೆಗಳಿಲ್ಲದೆ ಶಾಂಘೈ ಮೂಲಕ ಪ್ರಯಾಣಿಸಿದ್ದೇನೆ. ಇಲ್ಲಿಂದ ಹೋಗುವ ಭಾರತೀಯರಿಗೆ ಯಾವುದೇ ಸಮಸ್ಯೆ ಇರಲ್ಲ ಅಂತಾ ಲಂಡನ್‌ನಲ್ಲಿರುವ ಚೀನೀ ರಾಯಭಾರ ಕಚೇರಿ ದೃಢಪಡಿಸಿದರೂ ಹಲವಾರು ವಲಸೆ ಸಿಬ್ಬಂದಿ ಮತ್ತು ಚೀನಾ ಈಸ್ಟರ್ನ್ ಏರ್‌ಲೈನ್ಸ್ ಸಿಬ್ಬಂದಿ ಅಪಹಾಸ್ಯ ಮಾಡಿದರು. ತನ್ನನ್ನು ನೋಡಿ ನಕ್ಕರು ಮತ್ತು ಚೀನೀ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು" ಸೂಚಿಸಿದರು ಎಂದು ರಾಷ್ಟ್ರೀಯ ವಾಹಿನಿಯೊಂದಿಗೆ ಪ್ರೇಮಾ ಹೇಳಿಕೊಂಡಿದ್ದಾರೆ.
ವಿಮಾನ ನಿಲ್ದಾಣದ ಒಳಗೆ 18 ಗಂಟೆಗಳಗೂ ನಡೆದ ಅಗ್ನಿಪರೀಕ್ಷೆಯಲ್ಲಿ ಸ್ಪಷ್ಟ ಮಾಹಿತಿ ನೀಡಲಿಲ್ಲ. ಸರಿಯಾದ ಆಹಾರ ಅಥವಾ ವಿಮಾನ ನಿಲ್ದಾಣದ ಸೌಲಭ್ಯಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಇದಲ್ಲದೆ, ತನ್ನ ಪಾಸ್‌ಪೋರ್ಟ್ ಅನ್ನು ತಡೆ ಹಿಡಿಯಲಾಗಿದೆ. ಮಾನ್ಯವಾದ ವೀಸಾ ಹೊಂದಿದ್ದರೂ ಜಪಾನ್‌ಗೆ ವಿಮಾನ ಹತ್ತದಂತೆ ತಡೆಯಲಾಗಿದೆ ಎಂದು ಪ್ರೇಮಾ ಆರೋಪಿಸಿದ್ದಾರೆ.
ಕೊನೆಗೆ ಅವರು ಯುಕೆಯಲ್ಲಿರುವ ಸ್ನೇಹಿತರ ಮೂಲಕ ಶಾಂಘೈನಲ್ಲಿರುವ ಭಾರತೀಯ ದೂತಾವಾಸವನ್ನು ಸಂಪರ್ಕಿಸಿದ್ದಾರೆ. ಬಳಿಕ ಭಾರತೀಯ ಅಧಿಕಾರಿಗಳು ಆಕೆಯನ್ನು ಚೀನಾ ನಗರದಿಂದ ತಡರಾತ್ರಿ ಜಪಾನ್ ವಿಮಾನಕ್ಕೆ ಹತ್ತಿಸಿದ್ದಾರೆ.
ಈ ವಿಷಯವನ್ನು ಬೀಜಿಂಗ್ ಜೊತೆ ಪ್ರಸ್ತಾಪಿಸಿ, ಭಾಗಿಯಾಗಿರುವ ವಲಸೆ ಮತ್ತು ವಿಮಾನಯಾನ ಸಿಬ್ಬಂದಿಯ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಮತ್ತು ಪರಿಹಾರಕ್ಕಾಗಿ ಒತ್ತಾಯಿಸಬೇಕು. ಮುಂದೆ ಅಂತಾರಾಷ್ಟ್ರೀಯ ಪ್ರಯಾಣದ ಸಮಯದಲ್ಲಿ ಅರುಣಾಚಲ ಪ್ರದೇಶದ ಭಾರತೀಯರು ಅಂತಹ ಅಡೆತಡೆಗಳನ್ನು ಎದುರಿಸುವುದಿಲ್ಲ ಎಂಬ ಖಾತ್ರಿ ಒದಗಿಸಬೇಕು ಎಂದು ಪ್ರೇಮಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Advertisement