

ತಿರುವನಂತಪುರಂ: 50 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಬೈಕ್ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ತಂದೆಯಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 28 ವರ್ಷದ ಯುವಕ ಸೋಮವಾರ ಮೃತಪಟ್ಟಿದ್ದಾರೆ. ವಂಚಿಯೂರಿನ ಕುನ್ನುಂಪುರಂನ ಪೌರ್ಣಮಿ ನಿವಾಸಿ ಹೃದ್ಧಿಕ್ ಸೋಮವಾರ ಬೆಳಿಗ್ಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಈ ಹಿಂದೆ ಯುವಕನ ತಂದೆ ವಿನಯಾನಂದನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದ ಪೊಲೀಸರು ತದನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಇದೀಗ ಹೃದ್ಧಿಕ್ ಸಾವಿನೊಂದಿಗೆ ಆರೋಪವನ್ನು ಈಗ ಕೊಲೆ ಎಂದು ಬದಲಾಯಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 9 ರಂದು ಅವರ ಮನೆಯಲ್ಲಿ ಹಲ್ಲೆ ನಡೆದಿತ್ತು. ಐಷಾರಾಮಿ ಬೈಕ್ ಖರೀದಿಸಲು ಹಣ ಕೇಳಿದ್ದ ಹೃದ್ಧಿಕ್ ಮೊದಲು ವಿನಯಾನಂದನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಪ್ರತೀಕಾರವಾಗಿ ವಿನಯಾನಂದನ್ ಕಬ್ಬಿಣದ ರಾಡ್ ನಿಂದ ಹೃದ್ಧಿಕ್ ತಲೆಗೆ ಹೊಡೆದಿದ್ದಾನೆ.
ಹೃದ್ಧಿಕ್ ತನ್ನ ಹೆತ್ತವರ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿದ್ದ. ಆತನಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಕಳಂಕದ ಭಯದಿಂದ ಕುಟುಂಬವು ಆತನ ಆರೋಗ್ಯ ಸ್ಥಿತಿಯನ್ನು ಮುಚ್ಚಿಟ್ಟಿತ್ತು. ಆತನಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿರಲಿಲ್ಲ ಎಂದು ವರದಿಯಾಗಿದೆ.
ಹೃದ್ಧಿಕ್ ನ ನಿರಂತರ ಒತ್ತಡದಿಂದಾಗಿ ಕುಟುಂಬವು ರೂ. 12 ಲಕ್ಷ ಮೌಲ್ಯದ ಬೈಕ್ ಖರೀದಿಸಲು ಸಾಲ ಪಡೆದಿತ್ತು. ಆದರೆ, ಆತನ ಹುಟ್ಟುಹಬ್ಬಕ್ಕೂ ಮುನ್ನ ರೂ. 50 ಲಕ್ಷ ರೂ. ಬೆಲೆಯ ಮತ್ತೊಂದು ಬೈಕ್ ನೀಡಬೇಕೆಂದು ಒತ್ತಾಯಿಸಿ ಮತ್ತೆ ಹೃದ್ದಿಕ್ ಗಲಾಟೆ ಮಾಡಿದ್ದ ಎನ್ನಲಾಗಿದೆ.
ವಿನಯನಂದನ್ ಕುನ್ನುಂಪುರಂನಲ್ಲಿ ಕೆಫೆಟೇರಿಯಾ ನಡೆಸುತ್ತಿದ್ದಾರೆ.ಹೃದ್ಧಿಕ್ ಬೆಂಗಳೂರಿನಲ್ಲಿ ಅಡುಗೆ ತಂತ್ರಜ್ಞಾನದಲ್ಲಿ ಅಧ್ಯಯನ ಮಾಡಿದ್ದ. ಆತನ ತಾಯಿ ಅನುಪಮಾ ಬದುಕುಳಿದಿದ್ದಾರೆ. ಕುಟುಂಬವು ವಂಚಿಯೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕಾಲಡಿಯಲ್ಲಿರುವ ಅವರ ಪೂರ್ವಜರ ಮನೆಗೆ ಕೊಂಡೊಯ್ದು ಸೋಮವಾರ ಸಂಜೆ ವೇಳೆಗೆ ಅಂತ್ಯಕ್ರಿಯೆ ಮಾಡಲಾಯಿತು.
Advertisement