

ಭೂಪಾಲ್: ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಅಥವಾ ಆಕೆಯೊಂದಿಗೆ ಆತ ಸಂಬಂಧ ಹೊಂದುವವರೆಗೆ ಮೀಸಲಾತಿ ಮುಂದುವರಿಯಬೇಕು ಎಂದು ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಸಂಘದ ಸಾಮಾನ್ಯ ಸಭೆ ಭೋಪಾಲ್‌ನ ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ನಡೆಯಿತು. ಈ ವೇಳೆ ಮಾತನಾಡಿದ ವರ್ಮಾ, ಬ್ರಾಹ್ಮಣ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಅಥವಾ ನನ್ನ ಮಗ ಆಕೆಯೊಂದಿಗೆ ಸಂಬಂಧ ಹೊಂದುವವರೆಗೆ ಮೀಸಲಾತಿ ಮುಂದುವರಿಯಬೇಕು ಎಂದು ಹೇಳಿದ್ದಾರೆ.
ಸಂತೋಷ್ ವರ್ಮಾ ಈ ಹೇಳಿಕೆ ಅತ್ಯಂತ ಆಕ್ಷೇಪಾರ್ಹ. ಅಷ್ಟೇ ಅಲ್ಲದೇ, ಇದು ಇಡೀ ಮೇಲ್ಜಾತಿಯ ಸಮುದಾಯಕ್ಕೆ ಮಾಡಿರುವ ಅವಮಾನ. ಮದುವೆ ಎಂಬುದು ಖಾಸಗಿ ವಿಷಯ. ಪ್ರತಿಯೊಬ್ಬ ವಯಸ್ಕರಿಗೂ ಮದುವೆಯಾಗಲು ಸ್ವಾತಂತ್ರ್ಯವಿದೆ. ಯಾರು ಯಾರನ್ನು ಮದುವೆಯಾಗುತ್ತಾರೆ ಎಂಬುದು ಅವರ ವೈಯಕ್ತಿಕ ವಿಷಯವಾಗುತ್ತದೆ ಎಂದು ಅಖಿಲ ಭಾರತ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ಪುಷ್ಪೇಂದ್ರ ಮಿಶ್ರಾ ಹೇಳಿದ್ದಾರೆ.
ಇಷ್ಟಕ್ಕೂ ಮಗಳು ದಾನ ಮಾಡುವ ವಸ್ತುವಲ್ಲ. ಮೇಲ್ಜಾತಿಯ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಇಂತಹ ಹೇಳಿಕೆಗಳನ್ನು ನೀಡುವುದು ಅತ್ಯಂತ ಖಂಡನೀಯ. ಮದುವೆ ಸಂಪೂರ್ಣವಾಗಿ ವೈಯಕ್ತಿಕವಾದದ್ದು. ಮೀಸಲಾತಿಗೂ ಇದಕ್ಕೂ ಏನು ಸಂಬಂಧ?, ಈಗ ಸಮಾಜ ಬಹಳಷ್ಟು ಬದಲಾಗಿದೆ. ಹೆಚ್ಚಿನ ಸಂಖ್ಯೆಯ ಅಂತರ್ಜಾತಿ ವಿವಾಹಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಮೀಸಲು ಮತ್ತು ಮೀಸಲುರಹಿತ ವಿವಿಧ ಜಾತಿಗಳ ನಡುವೆ ಅನೇಕ ವಿವಾಹಗಳು ನಡೆಯುತ್ತಿವೆ. ಅಂತಹ ಹಲವಾರು ಜೋಡಿಗಳನ್ನು ನಾನು ಬಲ್ಲೆ. ಸಂತೋಷ್ ವರ್ಮಾರ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಸರ್ಕಾರ ಐಎಎಸ್ ನಡವಳಿಕೆ ನಿಯಮಗಳ ಅಡಿಯಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಅಜಾಕ್ಸ್‌ನ ರಾಜ್ಯ ಅಧ್ಯಕ್ಷ ಮತ್ತು ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಅವರು ಬ್ರಾಹ್ಮಣ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ. ಪೊಲೀಸರು ಶೀಘ್ರದಲ್ಲೇ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಐಎಎಸ್ ವರ್ಮಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡದಿದ್ದರೆ ಇಡೀ ಬ್ರಾಹ್ಮಣ ಸಮಾಜ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
Advertisement