

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ ನಲವತ್ತೊಂದು ನಕ್ಸಲರು ಶರಣಾಗಿದ್ದಾರೆ. ಅವರಲ್ಲಿ 32 ಮಂದಿ ತಲೆಗೆ ಒಟ್ಟಾರೆಯಾಗಿ 1.19 ಕೋಟಿ ರೂ. ಬಹುಮಾನ ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 ಮಹಿಳೆಯರು ಸೇರಿದಂತೆ 41 ನಕ್ಸಲರು ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದರು.
ರಾಜ್ಯ ಸರ್ಕಾರದ ಹೊಸ ಶರಣಾಗತಿ ಮತ್ತು ಪುನರ್ವಸತಿ ನೀತಿ ಹಾಗೂ "ಪೂನಾ ಮಾರ್ಗಮ್"(ಬಸ್ತರ್ ರೇಂಜ್ ಪೊಲೀಸರ ಸಾಮಾಜಿಕ ಪುನರ್ವಸತಿ ಅಭಿಯಾನ)ದಿಂದ ಪ್ರಭಾವಿತರಾಗಿ ನಕ್ಸಲರು ಶರಣಾಗಿದ್ದಾರೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಅವರು ಹೇಳಿದ್ದಾರೆ.
ಶರಣಾದ ನಕ್ಸಲರ ಪೈಕಿ ನಾಲ್ವರು ಪಿಎಲ್‌ಜಿಎ(ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಬೆಟಾಲಿಯನ್ ನಂ.1 ಮತ್ತು ಮಾವೋವಾದಿಗಳ ವಿವಿಧ ಕಂಪನಿಗಳ ಸದಸ್ಯರು, ಏರಿಯಾ ಸಮಿತಿಗಳ ಮೂವರು, 11 ಪ್ಲಟೂನ್ ಮತ್ತು ಏರಿಯಾ ಸಮಿತಿ ಪಕ್ಷದ ಸದಸ್ಯರು, ಇಬ್ಬರು ಪಿಎಲ್‌ಜಿಎ ಸದಸ್ಯರು, ನಾಲ್ಕು ಮಿಲಿಟಿಯಾ ಪ್ಲಟೂನ್ ಕಮಾಂಡರ್‌ಗಳು, ಒಬ್ಬ ಉಪ ಕಮಾಂಡರ್, ಆರು ಮಿಲಿಟಿಯಾ ಪ್ಲಟೂನ್ ಸದಸ್ಯರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ 41 ಕಾರ್ಯಕರ್ತರಲ್ಲಿ ಮೂವತ್ತೊಂಬತ್ತು ಮಾವೋವಾದಿಗಳ ದಕ್ಷಿಣ ಉಪ-ವಲಯ ಬ್ಯೂರೋಗೆ ಸೇರಿದವರಾಗಿದ್ದಾರೆ.
ಇವರೆಲ್ಲರೂ ದಂಡಕಾರಣ್ಯ ವಿಶೇಷ ವಲಯ ಸಮಿತಿ, ತೆಲಂಗಾಣ ರಾಜ್ಯ ಸಮಿತಿ ಮತ್ತು ನಿಷೇಧಿತ ಸಂಘಟನೆಯ ಧಮ್ತಾರಿ-ಗರಿಯಾಬಂದ್-ನುವಾಪಾದ ವಿಭಾಗಗಳೊಂದಿಗೆ ಸಂಬಂಧ ಹೊಂದಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
ಶರಣಾದ ಕಾರ್ಯಕರ್ತರು ಸಂವಿಧಾನದಲ್ಲಿ ನಂಬಿಕೆ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಜಾಪ್ರಭುತ್ವ ಚೌಕಟ್ಟಿನೊಳಗೆ ಘನತೆ ಮತ್ತು ಸುರಕ್ಷಿತ ಜೀವನವನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅವರಿಗೆ ಪುನರ್ವಸತಿ ನೀತಿಯಡಿಯಲ್ಲಿ ಪ್ರೋತ್ಸಾಹ ಧನವಾಗಿ 50,000 ರೂ.ಗಳ ತಕ್ಷಣದ ಆರ್ಥಿಕ ಸಹಾಯವನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement