

ಸಾಂವಿಧಾನಿಕ ಕರ್ತವ್ಯಗಳನ್ನು ಎತ್ತಿಹಿಡಿಯುವಂತೆ ಕರೆ ನೀಡಿರುವ ಪ್ರಧಾನ ಮಂತ್ರಿಗಳು ಅವು ಬಲವಾದ ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವದ ಮೂಲಾಧಾರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ದೇಶದ ಜನತೆಗೆ ಕರೆ ನೀಡಿದ್ದಾರೆ.
ಸಂವಿಧಾನ ದಿನದಂದು ದೇಶದ ನಾಗರಿಕರಿಗೆ ಬರೆದ ಪತ್ರದಲ್ಲಿ ಅವರು, ಮತದಾನದ ಹಕ್ಕನ್ನು ಸಕ್ರಿಯವಾಗಿ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿ ಹೇಳಿದರು. 18 ವರ್ಷ ತುಂಬಿದ ಮೊದಲ ಬಾರಿಗೆ ಮತದಾನ ಮಾಡುವವರನ್ನು ಗೌರವಿಸುವ ಮೂಲಕ ಶಾಲಾ- ಕಾಲೇಜುಗಳು ಈ ಸಂದರ್ಭವನ್ನು ಆಚರಿಸಬೇಕೆಂದು ಅವರು ಸೂಚಿಸಿದರು.
ಕರ್ತವ್ಯಗಳ ನೆರವೇರಿಕೆಯಿಂದ ಹಕ್ಕುಗಳು ಉದ್ಭವಿಸುತ್ತವೆ ಎಂಬ ಮಹಾತ್ಮ ಗಾಂಧಿಯವರ ನಂಬಿಕೆಯನ್ನು ನೆನಪಿಸಿಕೊಂಡ ಪ್ರಧಾನಿ, ಈ ಜವಾಬ್ದಾರಿಗಳನ್ನು ನಿರ್ವಹಿಸುವುದು ಭಾರತದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಅತ್ಯಗತ್ಯ ಎಂದು ಹೇಳಿದರು.
ಇಂದು ನಾವು ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುತ್ತವೆ. ದೇಶವು ವಿಕಸಿತ ಭಾರತದ ದೃಷ್ಟಿಕೋನದತ್ತ ಸಾಗುತ್ತಿರುವಾಗ ಜನರು ತಮ್ಮ ಕರ್ತವ್ಯಗಳನ್ನು ಮುಂಚೂಣಿಯಲ್ಲಿಡಬೇಕೆಂದು ಒತ್ತಾಯಿಸಿದರು.
ನಮ್ಮ ಸಂವಿಧಾನವು ಮಾನವ ಘನತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತದೆ. ಇದು ನಮಗೆ ಹಕ್ಕುಗಳೊಂದಿಗೆ ಅಧಿಕಾರ ನೀಡುವುದರ ಜೊತೆಗೆ, ನಾಗರಿಕರಾಗಿ ನಮ್ಮ ಕರ್ತವ್ಯಗಳನ್ನು ನೆನಪಿಸುತ್ತದೆ. ಅದನ್ನು ನಾವು ಯಾವಾಗಲೂ ಪೂರೈಸಲು ಪ್ರಯತ್ನಿಸಬೇಕು. ಈ ಕರ್ತವ್ಯಗಳು ಬಲವಾದ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದು ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದರು.
ಸಂವಿಧಾನದ ರಚನಕಾರರಿಗೆ ಅವರು ಗೌರವ ಸಲ್ಲಿಸಿದರು. ಅವರ ದೃಷ್ಟಿಕೋನವು ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಅನ್ವೇಷಣೆಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.
Advertisement