

ಲಖನೌ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಬುಧವಾರ ತಡರಾತ್ರಿ ರಾಮನಗರ-ಫತೇಪುರ್ ಫ್ಲೈಓವರ್‌ನಿಂದ ಮರದ ಪ್ಲೈಗಳನ್ನು ತುಂಬಿದ್ದ ಟ್ರಕ್ ವೊಂದು 25 ಅಡಿ ಎತ್ತರದ ಸೇತುವೆಯಿಂದ ಕಳೆಗೆ ಬಿದ್ದಿದ್ದು, ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಅಮೃತಸರ-ಸಹರ್ಸಾ ಗರೀಬ್ ರಥ ಎಕ್ಸ್‌ಪ್ರೆಸ್(12204) ರೈಲು ಪಕ್ಕದ ಡೌನ್ ಲೈನ್‌ನಲ್ಲಿ ಹಾದುಹೋಗುತ್ತಿದ್ದ ವೇಳೆಯೇ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಡಂಪರ್ ಟ್ರಕ್ ಸೇತುವೆಯ ರೇಲಿಂಗ್ ಗೆ ಗುದ್ದಿ, ಸುಮಾರು 25 ಅಡಿ ಮೇಲಿಂದ ಹಳಿಗಳ ಮೇಲೆ ಬಿದ್ದಿದೆ. ಈ ವೇಳೆ ಫ್ಲೈಓವರ್‌ನಿಂದ ಬಂದ ದೊಡ್ಡ ಕಲ್ಲು ಪಕ್ಕದ ಹಳಿಯಲ್ಲಿ ಸಂಚರಿಸುತ್ತಿದ್ದ ರೈಲಿನ G2 ಕೋಚ್‌ನ ಛಾವಣಿಗೆ ಬಡಿದಿದೆ. ಮುರಿದ ರೇಲಿಂಗ್‌ನ ಅವಶೇಷಗಳು ರೈಲಿನ ಮೇಲಿನ ಭಾಗಕ್ಕೆ ಅಪ್ಪಳಿಸಿದ್ದು, ರೈಲು ಸ್ವಲ್ಪದರಲ್ಲೇ ದೊಡ್ಡ ಹಾನಿಯಿಂದ ಪಾರಾಗಿದೆ.
ಘಟನೆಯ ನಂತರ ಬಾರಾಬಂಕಿ ಮತ್ತು ಗೊಂಡಾಗೆ ಹೋಗುವ ಎರಡೂ ಹಳಿಗಳಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಗೊಂಡಾ ನಿಲ್ದಾಣದಿಂದ ಆಗಮಿಸಿದ ರಕ್ಷಣಾ ತಂಡ ಟ್ರಕ್ ಅನ್ನು ಹಳಿಯಿಂದ ತೆರವುಗೊಳಿಸಿದೆ. ಆರು ಗಂಟೆಗಳ ನಂತರ ರೈಲು ಸೇವೆಯನ್ನು ಪುನಃ ಆರಂಭಿಸಲಾಗಿದೆ. ಈ ಘಟನೆ ಸುಮಾರು 24 ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿತು. ಗರೀಬ್ ರಥ ರೈಲು ಬೆಳಗಿನ ಜಾವ 3.30 ರ ಸುಮಾರಿಗೆ ಬಿಹಾರಕ್ಕೆ ತನ್ನ ಪ್ರಯಾಣವನ್ನು ಪುನರಾರಂಭಿಸಿತು.
ಅಪಘಾತದ ಸಮಯದಲ್ಲಿ ಇಡೀ ರೈಲು ನಡುಗಿದೆ. ಅದು ಹಳಿ ತಪ್ಪಿದಂತೆ ಭಾಸವಾಯಿತು ಎಂದು ಪಕ್ಕದಲ್ಲಿ ಹಾದುಹೋದ ಗರೀಬ್ ರಥ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್‍ನಲ್ಲಿದ್ದ ವಾರಣಾಸಿ ನಿವಾಸಿ ಚಮನ್ ಸಿಂಗ್ ಅಪಘಾತದ ಭಯಾನಕತೆಯನ್ನು ವಿವರಿಸಿದ್ದಾರೆ.
Advertisement