

ಚೆನ್ನೈ: ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಖಾಸಗಿ ಬಸ್ ಗಳು ಮುಖಾಮುಖಿ ಢಿಕ್ಕಿಯಾಗಿ ಕನಿಷ್ಠ 6 ಮಂದಿ ಸಾವನ್ನಪ್ಪಿ 39 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ತೆಂಕಸಿ ತೆಂಕಸಿಯಿಂದ 15 ಕಿ.ಮೀ ದೂರದಲ್ಲಿರುವ ದುರೈಸಾಮಿಯಾಪುರಂ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿದೆ. ಢಿಕ್ಕಿ ಹೊಡೆದ ಪರಿಣಾಮ ಬಸ್ ಗಳಲ್ಲಿದ್ದ ಕನಿಷ್ಠ ಆರು ಮಂದಿ ಸಾವು, 39 ಮಂದಿಗೆ ಗಾಯವಾಗಿದೆ.
ತಿರುಮಂಗಲಂ - ಶೆಂಗೊಟ್ಟೈ ರಾಷ್ಟ್ರೀಯ ಹೆದ್ದಾರಿ ರಸ್ತೆಯ ದುರೈಸಾಮಿಯಾಪುರಂ ಬಳಿ ತೆಂಕಸಿಯಿಂದ ಕಡಯನಲ್ಲೂರ್‌ಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಮಧುರೈನಿಂದ ತೆಂಕಸಿಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಇನ್ನೊಂದು ಬಸ್ ಪರಸ್ಪರ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಪರಿಣಾಮವಾಗಿ ಎರಡೂ ಬಸ್‌ಗಳು ತೀವ್ರವಾಗಿ ಹಾನಿಗೊಳಗಾದವು ಮತ್ತು ಆರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮೂವತ್ತೊಂಬತ್ತು ಪ್ರಯಾಣಿಕರನ್ನು ತೆಂಕಾಸಿ ಜಿಲ್ಲಾ ಸರ್ಕಾರಿ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು.
ಮೃತರಲ್ಲಿ ಐದು ಮಂದಿ ಮಹಿಳೆಯರು ಮತ್ತು ಓರ್ವ ಪುರುಷ ಸೇರಿದ್ದಾನೆ ಎಂದು ಹೇಳಲಾಗಿದೆ. ಮೃತರನ್ನು ಪುದುಕುಡಿಯ ವನರಾಜ್ (67), ಕಡಯನಲ್ಲೂರಿನ ತೆನ್ಮೋಳಿ (55), ಪುಲಿಯಂಗಡಿಯ ಮಲ್ಲಿಕಾ (55) ಮತ್ತು ಸುಮಾರು 30, 50 ಮತ್ತು 50 ವರ್ಷ ವಯಸ್ಸಿನ ಮೂವರು ಅಪರಿಚಿತ ಮಹಿಳೆಯರು ಎಂದು ಎಲತ್ತೂರು ಪೊಲೀಸರು ಗುರುತಿಸಿದ್ದಾರೆ.
ಅಂತೆಯೇ ಈ ಅಪಘಾತದಲ್ಲಿ ಮಕ್ಕಳು ಸೇರಿದಂತೆ 39 ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು 108 ಆ್ಯಂಬುಲೆನ್ಸ್ ಗಳಲ್ಲಿ ಜಿಲ್ಲಾ ಸರ್ಕಾರಿ ಪ್ರಧಾನ ಕಚೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾಧಿಕಾರಿ ಎ ಕೆ ಕಮಲ್ ಕಿಶೋರ್, ಪೊಲೀಸ್ ವರಿಷ್ಠಾಧಿಕಾರಿ ಎಸ್ ಅರವಿಂದ್, ಎಲತ್ತೂರು ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಅಪಘಾತವು ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿತು. ಮೃತ ಮೂವರು ವ್ಯಕ್ತಿಗಳ ಗುರುತುಗಳು ಇನ್ನೂ ದೃಢೀಕರಿಸಲ್ಪಟ್ಟಿಲ್ಲ ಮತ್ತು ಪೊಲೀಸರು ಗಾಯಾಳುಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
Advertisement