

ಕೋಲಾರ: ಸೋಮವಾರ ಬೆಳಗಿನ ಜಾವ ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಗ್ರಾಮದಲ್ಲಿ ಅತಿವೇಗದಿಂದ ಬಂದ ಕಾರೊಂದು ಫ್ಲೈಓವರ್ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದು, ಅಂಡರ್‌ಪಾಸ್‌ಗೆ ಉರುಳಿ ಬಿದ್ದ ಪರಿಣಾಮ ಶಬರಿಮಲೆಗೆ ತೆರಳುತ್ತಿದ್ದ ನಾಲ್ವರು ಯಾತ್ರಿಕರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ಬೆಳಗಿನ ಜಾವ 2.15 ರಿಂದ 2.30ರ ನಡುವೆ ಸಂಭವಿಸಿದೆ. ಅಪಘಾತದಲ್ಲಿ ಸಾವಿಗೀಡಾದವರೆಲ್ಲರೂ ಸ್ನೇಹಿತರಾಗಿದ್ದು, ಕೇರಳದ ಶಬರಿಮಲೆಗೆ ಕಾರಿನಲ್ಲಿ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಗೋಪಿ (38), ಗೌತಮ್ ರಮೇಶ್ (28), ಹರಿಹರನ್ (27) ಮತ್ತು ಜಯಂಕರ್ (30) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಚೆನ್ನೈ ಮೂಲದವರು ಎನ್ನಲಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಚಾಲಕ ಅತಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದರಿಂದ ಅಪಘಾತ ಸಂಭವಿಸಿದೆ. ಕಾರು ಫ್ಲೈಓವರ್‌ನ ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಮತ್ತು ಕೆಳಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಕಾರು ಮತ್ತು ಅದರಲ್ಲಿದ್ದವರು ಸುಮಾರು 100 ಮೀಟರ್ ಆಳದ ಅಂಡರ್‌ಪಾಸ್‌ಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Advertisement