

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯ 10 ಲಕ್ಷ ಫಲಾನುಭವಿಗಳಿಗೆ 1,000 ಕೋಟಿ ರೂ.ಗಳನ್ನು ವಿತರಿಸಿದರು. ಈ ಯೋಜನೆಯು ರಾಜ್ಯದ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.
ಇತ್ತೀಚೆಗೆ ದಾಖಲೆಯ ಐದನೇ ಬಾರಿಗೆ ಅಧಿಕಾರಕ್ಕೆ ಮರಳಿದ ನಿತೀಶ್ ಕುಮಾರ್ ಅವರು ಇಂದು ತಮ್ಮ ಅಧಿಕೃತ ನಿವಾಸದಲ್ಲಿ ಸಂಪುಟ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ, ಡಿಬಿಟಿ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬ ಫಲಾನುಭವಿಗೆ 10,000 ರೂ.ಗಳನ್ನು ಅವರ ಖಾತೆಗೆ ವರ್ಗಾವಣೆ ಮಾಡಿದರು.
ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್, "ಇದುವರೆಗೆ ಒಟ್ಟು 1.56 ಕೋಟಿ ಮಹಿಳೆಯರು 10 ಸಾವಿರ ರೂ. ಪಡೆದಿದ್ದಾರೆ" ಎಂದು ಹೇಳಿದರು.
"ಸ್ವಯಂ ಉದ್ಯೋಗಕ್ಕಾಗಿ ಈ ಹಣವನ್ನು ಬಳಸಲು ಫಲಾನುಭವಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಹಣದಲ್ಲಿ ಸ್ವಯಂ ಉದ್ಯೋಗ ಮಾಡುವವರಿಗೆ ಶೀಘ್ರದಲ್ಲೇ ತಲಾ 2 ಲಕ್ಷ ರೂ.ಗಳ ಹೆಚ್ಚಿನ ಸಹಾಯ ದೊರೆಯಲಿದೆ" ಎಂದು ಅವರು ಹೇಳಿದರು.
ಗಮನಾರ್ಹವಾಗಿ, ಈ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ, ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸುಮಾರು ಒಂದು ತಿಂಗಳ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದ್ದರು. ಚುನಾವಣೆ ಘೋಷಣೆಯಾದ ನಂತರವೂ ಈ ಪ್ರಕ್ರಿಯೆಯು ಮುಂದುವರೆಯಿತು. ಹೀಗಾಗಿ ಈ ಹಣದಿಂದ ಮತಗಳನ್ನು "ಖರೀದಿಸಲಾಗುತ್ತಿದೆ" ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
Advertisement