

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಕುರಿತು ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯ ನಡುವೆ, ತೃಣಮೂಲ ಕಾಂಗ್ರೆಸ್ ನಿಯೋಗವು ಶುಕ್ರವಾರ ಪೂರ್ಣ ಚುನಾವಣಾ ಆಯೋಗದ ಪೀಠವನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕನಿಷ್ಠ 40 ಸಾವುಗಳು ಸಂಭವಿಸಿವೆ ಎಂದು ಆರೋಪಿಸಿದೆ. ಅಲ್ಲದೆ ಚುನಾವಣಾ ಆಯೋಗದ ಮುಖ್ಯಸ್ಥರ "ಕೈಗೆ ರಕ್ತ ಅಂಟಿದೆ" ಎಂದು ಟೀಕಿಸಿದೆ.
ಪಶ್ಚಿಮ ಬಂಗಾಳ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ನಡುವೆಯೇ ಟಿಎಂಸಿ ರಾಜ್ಯಸಭಾ ನಾಯಕ ಡೆರೆಕ್ ಒ'ಬ್ರೇನ್ ನೇತೃತ್ವದ 10 ಸದಸ್ಯರ ನಿಯೋಗವು ಇಂದು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿತು.
ನಿಯೋಗದಲ್ಲಿ ಲೋಕಸಭಾ ಸಂಸದರಾದ ಮಹುವಾ ಮೊಯಿತ್ರಾ, ಸತಾಬ್ದಿ ರಾಯ್, ಕಲ್ಯಾಣ್ ಬ್ಯಾನರ್ಜಿ, ಪ್ರತಿಮಾ ಮೊಂಡಲ್, ಸಜ್ದಾ ಅಹ್ಮದ್ ಮತ್ತು ರಾಜ್ಯಸಭಾ ಸಂಸದರಾದ ಡೋಲಾ ಸೇನ್, ಮಮತಾ ಠಾಕೂರ್, ಸಾಕೇತ್ ಗೋಖಲೆ ಹಾಗೂ ಪ್ರಕಾಶ್ ಚಿಕ್ ಬಾರಿಕ್ ಇದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡೆರೆಕ್ ಓ'ಬ್ರೇನ್ ಅವರು, ಪಕ್ಷವು ಐದು ಪ್ರಶ್ನೆಗಳನ್ನು ಎತ್ತಿದೆ. ಆದರೆ ಮುಖ್ಯ ಚುನಾವಣಾ ಆಯುಕ್ತ(CEC) ಜ್ಞಾನೇಶ್ ಕುಮಾರ್ ಅವರು ನಮ್ಮ ಪ್ರಶ್ನೆಗೆ ಯಾವುದೇ ಉತ್ತರಗಳನ್ನು ನೀಡಿಲ್ಲ ಎಂದರು.
"ಸಿಇಸಿಯವರ ಕೈಗೆ ರಕ್ತದ ಕಲೆ ಅಂಟಿದೆ ಎಂದು ಹೇಳುವ ಮೂಲಕ ನಾವು ಸಭೆಯನ್ನು ಪ್ರಾರಂಭಿಸಿದೆವು ಮತ್ತು ಐದು ಪ್ರಶ್ನೆಗಳನ್ನು ಎತ್ತಿದ್ದೇವೆ. ಇದರ ನಂತರ, ಕಲ್ಯಾಣ್ ಬ್ಯಾನರ್ಜಿ, ಮಹುವಾ ಮೊಯಿತ್ರಾ ಮತ್ತು ಮಮತಾ ಬಾಲಾ ಠಾಕೂರ್ ಸುಮಾರು 40 ನಿಮಿಷಗಳ ಕಾಲ ಮಾತನಾಡಿದರು ಎಂದು ಓ'ಬ್ರೇನ್ ಹೇಳಿದರು.
"ನಂತರ ಸಿಇಸಿ ಒಂದು ಗಂಟೆ ನಿರಂತರವಾಗಿ ಮಾತನಾಡಿದರು. ನಾವು ಮಾತನಾಡುವಾಗ ನಮಗೆ ಅಡ್ಡಿಪಡಿಸಲಿಲ್ಲ. ಆದರೆ ನಮ್ಮ ಐದು ಪ್ರಶ್ನೆಗಳಲ್ಲಿ ಯಾವುದಕ್ಕೂ ನಮಗೆ ಯಾವುದೇ ಉತ್ತರ ಸಿಗಲಿಲ್ಲ" ಎಂದು ಅವರು ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ 40 ಸಾವುಗಳ ಪಟ್ಟಿಯನ್ನು ನಿಯೋಗವು ಸಿಇಸಿ ಜೊತೆ ಹಂಚಿಕೊಂಡಿದೆ ಎಂದು ಮೊಯಿತ್ರಾ ಹೇಳಿದರು. ಆದಾಗ್ಯೂ, ಆಯೋಗವು ಅದನ್ನು ಕೇವಲ ಆರೋಪಗಳೆಂದು ತಳ್ಳಿಹಾಕಿದೆ ಎಂದು ತಿಳಿಸಿದರು.
Advertisement