

ಜಮ್ಮು: ಜಮ್ಮು ಮತ್ತು ಕಾಶ್ಮೀರ ಪತ್ರಕರ್ತ ಅರ್ಫಾಜ್ ಅಹ್ಮದ್ ಡೇಯಿಂಗ್ ಅವರ ಮನೆಯನ್ನು ಅಧಿಕಾರಿಗಳು ಗುರುವಾರ ನೆಲಸಮ ಮಾಡಿದ ನಂತರ, ಜಮ್ಮುವಿನ ಹಿಂದೂ ನಿವಾಸಿ ಕುಲದೀಪ್ ಶರ್ಮಾ ಅವರು ಐದು ಮಾರ್ಲಾ ನಿವೇಶನವನ್ನು ಅವರಿಗೆ ಉಡುಗೊರೆಯಾಗಿ ನೀಡಿದ ಹೃದಯಸ್ಪರ್ಶಿ ಘಟನೆ ನಡೆದಿದೆ.
ಜಮ್ಮು ಮತ್ತು ಕಾಶ್ಮೀರ ಆಡಳಿತವು ಡೇಯಿಂಗ್ ಅವರ ಮನೆಯನ್ನು ಸರ್ಕಾರಿ ಭೂಮಿ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅದನ್ನು ನೆಲಸಮ ಮಾಡಿದೆ.
ಆದರೆ, ನಾನು ಮಾಡಿದ ವರದಿಗೆ ಪ್ರತೀಕಾರವಾಗಿ ತಮ್ಮ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ಡೇಯಿಂಗ್ ಹೇಳಿದ್ದಾರೆ.
ನೀಸ್ ಸೆಹರ್ ಇಂಡಿಯಾ ಎಂಬ ಡಿಜಿಟಲ್ ಸುದ್ದಿ ಪೋರ್ಟಲ್ ನಡೆಸುತ್ತಿರುವ ಡೇಯಿಂಗ್, ಇತ್ತೀಚೆಗೆ ಪ್ರಮುಖ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶಂಕಿತ ಡ್ರಗ್ಸ್ ಕಳ್ಳಸಾಗಣೆದಾರರೊಂದಿಗೆ ಪೊಲೀಸ್ ಅಧಿಕಾರಿಯ ನಂಟು ಹೊಂದಿದ್ದಾರೆ ಎಂದು ವರದಿ ಮಾಡಿದ್ದರು. ಹೀಗಾಗಿ ತಮ್ಮ ಮನೆ ಧ್ವಂಸ ಮಾಡಲಾಗಿದೆ ಎಂದು ಪತ್ರಕರ್ತ ಹೇಳಿದ್ದಾರೆ.
ಮನೆ ಧ್ವಂಸದಿಂದ ಡೇಯಿಂಗ್ ಅವರ ವೃದ್ಧ ಪೋಷಕರು, ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳು ನಿರಾಶ್ರಿತರಾಗಿದ್ದಾರೆ.
ಏತನ್ಮಧ್ಯೆ, ಧ್ವಂಸದ ಹೃದಯ ವಿದ್ರಾವಕ ದೃಶ್ಯಗಳಿಂದ ಮತ್ತು ಪತ್ರಕರ್ತನ ಕುಟುಂಬ ಹೆಚ್ಚಿನ ಸಮಯ ನೀಡುವಂತೆ ಅಧಿಕಾರಿಗಳಲ್ಲಿ ಬೇಡಿಕೊಂಡರೂ ಕೊಡದಿದ್ದಾಗ, ಹಿಂದೂ ನೆರೆಹೊರೆಯವರು ಆತನ ಕುಟುಂಬಕ್ಕೆ ಸಹಾಯ ಮಾಡಲು ಮುಂದೆ ಬಂದರು.
"ನಾನು ಅರ್ಫಾಜ್‌ಗೆ 5 ಮರ್ಲಾ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದೇನೆ. ಅದಕ್ಕೆ ಸರಿಯಾದ ಕಂದಾಯ ದಾಖಲೆಗಳನ್ನು ನೀಡಿದ್ದೇನೆ. ಅದನ್ನು ನೋಂದಾಯಿಸಿದ್ದೇನೆ. ಇದು ನನ್ನ ಭೂಮಿ ಮತ್ತು ನನ್ನ ಸಹೋದರ ಪತ್ರಕರ್ತ ಅಸಹಾಯಕನಾಗಿ ಉಳಿಯಬಾರದು ಎಂದು ಅದನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ" ಎಂದು ಕುಲದೀಪ್ ಶರ್ಮಾ ಹೇಳಿದ್ದಾರೆ.
ಮನೆ ಧ್ವಂಸದ ದುಃಖಕರ ದೃಶ್ಯಗಳನ್ನು ನೋಡಿದ ನಂತರ ಶರ್ಮಾ ತೀವ್ರವಾಗಿ ಭಾವುಕರಾದರು ಎಂದು ಅವರು ತಿಳಿಸಿದ್ದಾರೆ.
"ಅವರ ದುಃಸ್ಥಿತಿಯಿಂದ ನಾನು ನಡುಗಿ ಹೋದೆ ಮತ್ತು ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದೆ" ಎಂದು ಅವರು ಹೇಳಿದ್ದಾರೆ.
"ಅಲ್ಲದೆ ಅವರ ಮನೆಯನ್ನು ಪುನರ್ನಿರ್ಮಿಸಲು ನಾನು ಸಹಾಯ ಮಾಡುತ್ತೇನೆ ಎಂದು ನಾನು ಹೇಳಿದ್ದೇನೆ. ಏನೇ ಆದರೂ ಅವರ ಮನೆಯನ್ನು ಪುನರ್ನಿರ್ಮಿಸಲಾಗುವುದು" ಎಂದು ಶರ್ಮಾ ಪ್ರತಿಜ್ಞೆ ಮಾಡಿದರು.
"ಅವರು 3 ಮಾರ್ಲಾಗಳಲ್ಲಿ ನಿರ್ಮಿಸಲಾದ ಅವರ ಮನೆಯನ್ನು ಕೆಡವಿದರು. ಹೀಗಾಗಿ ನಾನು ಅವರಿಗೆ 5 ಮಾರ್ಲಾಗಳನ್ನು ನೀಡಿದ್ದೇನೆ. ಅವರು ಇದನ್ನೂ ಕೆಡವಿದರೆ, ನಾನು ಅವರಿಗೆ 10 ಮಾರ್ಲಾ ಭೂಮಿಯನ್ನು ನೀಡುತ್ತೇನೆ. ದಯವಿಟ್ಟು ಜನರ ಮೇಲೆ ದಬ್ಬಾಳಿಕೆ ಮಾಡಬೇಡಿ. ಅವರ ಕುಟುಂಬ ಮತ್ತು ಚಿಕ್ಕ ಮಕ್ಕಳು ಈಗ ಬೀದಿಗೆ ಬಿದ್ದಿದ್ದಾರೆ" ಎಂದು ಮುಸ್ಲಿಂ ಪತ್ರಕರ್ತನ ಕುಟುಂಬದೊಂದಿಗೆ ಗಟ್ಟಿಯಾಗಿ ನಿಂತಿರುವ ಶರ್ಮಾ ಹೇಳಿದ್ದಾರೆ.
"ನಮ್ಮ ಕೋಮು ಸಾಮರಸ್ಯ ಎಂದಿಗೂ ಕೊನೆಗೊಳ್ಳುವುದಿಲ್ಲ. ನಾವು ಅವರನ್ನು ಬೆಂಬಲಿಸುತ್ತೇವೆ. ನನ್ನಂತೆಯೇ ಇನ್ನೂ ಹೆಚ್ಚಿನವರು ಇದ್ದಾರೆ" ಎಂದು ಅವರು ತಿಳಿಸಿದರು.
ಇನ್ನು ಅವರ ಮಗಳು ತಾನಿಯಾ ಶರ್ಮಾ ಸಹ ತನ್ನ ತಂದೆಯ ನಿರ್ಧಾರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ನನ್ನ ತಂದೆ ತೆಗೆದುಕೊಂಡ ನಿರ್ಧಾರ ಶ್ಲಾಘನೀಯ. ಈ ಧ್ವಂಸ ಕಾರ್ಯಾಚರಣೆಗಳಲ್ಲಿ ಮನೆ ಕಳೆದುಕೊಳ್ಳುವ ಕುಟುಂಬಗಳನ್ನು ಬೆಂಬಲಿಸಲು ಜಮ್ಮು ಮತ್ತು ಕಾಶ್ಮೀರ ಜನರು ಒಗ್ಗೂಡಬೇಕು ಎಂದು ನಾನು ನಂಬುತ್ತೇನೆ" ಎಂದು ತಾನಿಯಾ ಹೇಳಿದ್ದಾರೆ.
Advertisement