
ಶ್ರೀನಗರ: ಸರ್ಕಾರದ ವಿರುದ್ಧ ಕಿರುಕುಳ ಆರೋಪ ಮಾಡಿರುವ ಸೋನಮ್ ವಾಂಗ್‌ಚುಕ್ ಅವರ ಪತ್ನಿ, ಪತಿಯನ್ನೂ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಸೋನಮ್ ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆದಿದ್ದು, ಪತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡುವಂತೆ ಆಗ್ರಹಿಸಿದ್ದಾರೆ.
ಮೂರು ಪುಟಗಳ ಪತ್ರ ಬರೆದಿರುವ ಅವರು, ಕಳೆದ 4 ವರ್ಷಗಳಿಂದ ಜನ ಪರವಾಗಿ ಮಾತನಾಡಿದ್ದಕ್ಕಾಗಿ ರಾಜ್ಯ ಸರ್ಕಾರ ನಮಗೆ ಕಿರುಕುಳ ನೀಡುತ್ತಿದೆ. ನನ್ನ ಪತಿಯ ಸ್ಥಿತಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
"ಸೆಪ್ಟೆಂಬರ್ 26 ರಂದು, ನನ್ನ ಪತಿ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ, 1980 ರ ಸೆಕ್ಷನ್ 3(2) ರ ಅಡಿಯಲ್ಲಿ ಬಂಧಿಸಲಾಯಿತು. ವಾಂಗ್ಚುಕ್ ಅವರನ್ನು ಎಎಸ್ಪಿ ರಿಷಭ್ ಶುಕ್ಲಾ ಅವರೊಂದಿಗೆ ರಾಜಸ್ಥಾನದ ಜೋಧ್‌ಪುರದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ನನಗೆ ತಿಳಿಸಲಾಯಿತು. ಜೋಧ್‌ಪುರ ತಲುಪುತ್ತಿದ್ದಂತೆಯೇ ಪತಿಯೊಂದಿಗೆ ಮಾತನಾಡಿಸುವ ಭರವಸೆ ನೀಡಿದ್ದರು. ಆದರೆ, ಇಂದಿನವರೆಗೆ (ಅಕ್ಟೋಬರ್ 1) ನನಗೆ ಕರೆ ಮಾಡಿಲ್ಲ ಅಥವಾ ನನ್ನ ಪತಿಯೊಂದಿಗೆ ಮಾತನಾಡುವಂತೆ ಮಾಡಿಲ್ಲ. ನನ್ನ ಪತಿಯ ಸ್ಥಿತಿಯ ಬಗ್ಗೆ ನನಗೆ ಮಾಹಿತಿ ತಿಳಿದಿಲ್ಲ ಎಂದು ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (HIAL) ಲಡಾಖ್‌ನ ಸಂಸ್ಥಾಪಕಿ ಮತ್ತು ಸಿಇಒ ಗೀತಾಂಜಲಿ ತಿಳಿಸಿದ್ದಾರೆ.
"ನನ್ನ ಪತಿಯನ್ನು ಎಲ್ಲಿಯೇ ಬಂಧಿಸಿದ್ದರೂ, ಅವರನ್ನು ಫೋನ್‌ನಲ್ಲಿ ಅಥವಾ ವೈಯಕ್ತಿಕವಾಗಿ ಭೇಟಿಯಾಗಿ, ಮಾತನಾಡಲು ನನಗೆ ಹಕ್ಕಿಲ್ಲವೇ? ನನಗೆ ನನ್ನ ಪತಿಯ ಬಂಧನದ ಕಾರಣವನ್ನು ತಿಳಿಯಲು ಮತ್ತು ನ್ಯಾಯಾಲಯದ ಮುಂದೆ ನ್ಯಾಯವನ್ನು ಪಡೆಯುವ, ಕಾನೂನುಬದ್ಧ ಹಕ್ಕುಗಳನ್ನು ಸಮರ್ಥಿಸಲು ಸಹಾಯ ಮಾಡಲು ಸಾಧ್ಯವಿಲ್ಲವೇ? ಬಂಧನಕ್ಕೊಳಗಾದ ನನ್ನ ಪತಿಯ ಸ್ಥಿತಿಯನ್ನು ತಿಳಿದುಕೊಳ್ಳಲು ನನಗೆ ಹಕ್ಕಿಲ್ಲವೇ? ಭಾರತದ ಜವಾಬ್ದಾರಿಯುತ ನಾಗರಿಕನಾಗಿ, ನಮಗೆ ಶಾಂತಿಯುತ ಅಭಿವ್ಯಕ್ತಿ ಮತ್ತು ಚಲನೆಯ ಸ್ವಾತಂತ್ರ್ಯದ ಹಕ್ಕಿಲ್ಲವೇ?
ನಮ್ಮ ಸಂಸ್ಥೆ (ಎಚ್ಐಎಎಲ್) ಇರುವ ಹಳ್ಳಿ ಫಿಯಾಂಗ್ ನಲ್ಲಿ ನನ್ನನ್ನು ಸಿಆರ್ ಪಿಎಫ್ ಕಣ್ಗಾವಲಿನಲ್ಲಿ ಇರಿಸಲಾಯಿತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸಹ ಕಣ್ಗಾವಲಿನಲ್ಲಿ ಇರಿಸಲಾಗಿತ್ತು. ಸಂಸ್ಥೆಯ ಇಬ್ಬರು ಸದಸ್ಯರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು, ಯಾವುದೇ ಕಾನೂನಿನ ಅಧಿಕಾರವಿಲ್ಲದೆ ಮಾಧ್ಯಮದವರಿಗೆ ಸಹ ಕ್ಯಾಂಪಸ್ ಒಳಗೆ ಪ್ರವೇಶಿಸಲು ಮತ್ತು ನಮ್ಮೊಂದಿಗೆ ಮಾತನಾಡಲು ಅವಕಾಶ ನೀಡಿಲ್ಲ.
ಸೆಪ್ಟೆಂಬರ್ 30ರಂದು ನಮ್ಮ ಸಂಸ್ಥೆಗೆ ಎಫ್ಐಆರ್ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ನೋಟಿಸ್ ನಲ್ಲಿ 2025 ರಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ, ವಿದ್ಯಾರ್ಥಿಗಳು, ಫಿಯಾಂಗ್‌ನ HIAL ಸಂಸ್ಥೆಯಲ್ಲಿ ವಾಸಿಸುವ ವಸತಿ ಸಿಬ್ಬಂದಿ ಶಿಕ್ಷಕರ ತರಬೇತಿದಾರರು ಮತ್ತು ಸಂಸ್ಥೆಯ ದಾಖಲಾತಿಗಳ ಪಟ್ಟಿಯನ್ನು ಒದಗಿಸುವಂತೆ ಸೂಚಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ನನ್ನ ಪತಿ ಮತ್ತು ಅವರನ್ನು ಬೆಂಬಲಿಸುವವರನ್ನು ಗುರಿ ಮಾಡಲಾಗುತ್ತಿದೆ. ನಮ್ಮನ್ನು ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ.
ನನ್ನ ಪತಿಯ ಬಂಧನದ ನಂತರವೂ ನಮ್ಮ ಮೇಲೆ ಕಣ್ಗಾವಲಿರಿಸಿರುವುದು ಬೇಸರ ತರಿಸಿದೆ. ಇದು ಪ್ರತಿಯೊಬ್ಬ ನಾಗರಿಕನಿಗೆ ಕಾನೂನು ಪ್ರಾತಿನಿಧ್ಯದ ಮೂಲಭೂತ ಹಕ್ಕನ್ನು ಖಾತರಿಪಡಿಸುವ 21 ಮತ್ತು 22 ನೇ ವಿಧಿಗಳು ಸೇರಿದಂತೆ ಭಾರತದ ಸಂವಿಧಾನದ ನೀತಿಶಾಸ್ತ್ರದ ಉಲ್ಲಂಘನೆಯಾಗಿದೆ. ಹವಾಮಾನ ಬದಲಾವಣೆ, ಕರಗುತ್ತಿರುವ ಹಿಮನದಿಗಳು, ಶೈಕ್ಷಣಿಕ ಸುಧಾರಣೆಗಳು ಮತ್ತು ತಳಮಟ್ಟದ ನಾವೀನ್ಯತೆಯ ಬಗ್ಗೆ ಮಾತನಾಡುವುದು ಅಪರಾಧವೇ? ಕಳೆದ ನಾಲ್ಕು ವರ್ಷಗಳಿಂದ ಗಾಂಧೀಜಿ ರೀತಿಯಲ್ಲಿ ಶಾಂತಿಯುತವಾಗಿ ದುರ್ಬಲವಾಗಿರುವ ಹಿಂದುಳಿದ ಬುಡಕಟ್ಟು ಪ್ರದೇಶದ ಉನ್ನತಿಗಾಗಿ ಧ್ವನಿ ಎತ್ತುಲಾಗುತ್ತಿದೆ. ಇದು ಅಪರಾಧವೇ? ಇದನ್ನು ಖಂಡಿತವಾಗಿಯೂ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಕರೆಯಲಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಭಾರತೀಯ ಸೇನೆಗೆ ವಾಂಗ್‌ಚುಕ್ ನೀಡಿರುವ ಬೆಂಬಲವನ್ನು ಪ್ರಸ್ತಾಪಿಸಿರುವ ಅವರು, ಸೇನಾಧಿಕಾರಿಗಳು, ಯೋಧರ ಪರವಾಗಿ ಪರಿಣಾಮಕಾರಿ ರೀತಿಯಲ್ಲಿ ಹೋರಾಟ ನಡೆಸಿದ್ದರು. ಈ ಹೋರಾಟದ ಬಳಿಕ ಸೇನೆಗೆ ಆಶ್ರಯಗಳನ್ನು ನಿರ್ಮಿಸಲಾಗುತ್ತಿದೆ. ಲಡಾಖ್‌ನ ಮಣ್ಣಿನ ಮಗನನ್ನು ಇಷ್ಟು ಕಳಪೆಯಾಗಿ ನಡೆಸಿಕೊಳ್ಳುವುದು ಕೇವಲ ಪಾಪವಲ್ಲ, ಒಗ್ಗಟ್ಟು ಮತ್ತು ಶಾಂತಿಯುತ ಸಹಬಾಳ್ವೆಯೊಂದಿಗೆ ಬಲವಾದ ಗಡಿಗಳನ್ನು ನಿರ್ಮಿಸುವಲ್ಲಿನ ಕಾರ್ಯತಂತ್ರದ ದೋಷವಾಗಿದೆ. ನನ್ನ ಪತಿ ಸೋನಮ್ ವಾಂಗ್‌ಚುಕ್ ಯಾವಾಗಲೂ ಭಾರತದ ಒಗ್ಗಟ್ಟಿಗಾಗಿ ಮತ್ತು ನಮ್ಮ ಗಡಿಗಳನ್ನು ಬಲಪಡಿಸುವುದಕ್ಕಾಗಿ ನಿಂತಿದ್ದಾರೆ.
ಲಡಾಖ್‌ನಂತಹ ದುರ್ಬಲ ಪ್ರದೇಶದಲ್ಲಿ ಜನರ ಪರವಾಗಿ ನಿಲ್ಲುವುದು, ಅಜಾಗರೂಕ ಮತ್ತು ಅನಿಯಂತ್ರಿತ ಅಭಿವೃದ್ಧಿ ಚಟುವಟಿಕೆಗಳ ವಿರುದ್ಧ ಹೋರಾಡುವುದು ಪಾಪವೇ? ವಾಂಗ್‌ಚುಕ್ ಬಂಧನ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ಮಧ್ಯಪ್ರವೇಶಿಸಬೇಕು. ಸೋನಮ್ ವಾಂಗ್ಚುಕ್ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ವಾಂಗ್‌ಚುಕ್ ತಮ್ಮ ದೇಶಕ್ಕೆ ಬೆದರಿಕೆಯಾಗಲು ಎಂದಿಗೂ ಸಾಧ್ಯವಿಲ್ಲ. ಅವರು ಲಡಾಖ್‌ನ ಕೆಚ್ಚೆದೆಯ ಮಣ್ಣಿನ ಪುತ್ರರಿಗೆ ಸೇವೆ ಸಲ್ಲಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ನಮ್ಮ ರಾಷ್ಟ್ರ ರಕ್ಷಣೆಯಲ್ಲಿ ಭಾರತೀಯ ಸೇನೆಯೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆಂದುತ ತಿಳಿಸಿದ್ದಾರೆ.
Advertisement