
ಹೈದರಾಬಾದ್: ದುರ್ಗಾ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮೊಟ್ಟೆ ಎಸೆತದಿಂದ ಕೆಲಕಾಲ ಕೋಮು ಉದ್ವಿಗ್ನತೆ ಉಂಟಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಚಾದರ್‌ಘಾಟ್‌ನಲ್ಲಿ, ಶನಿವಾರ ರಾತ್ರಿ 11.45 ರ ಸುಮಾರಿನಲ್ಲಿ ಆರ್‌ಕೆಟಿ ಅಪಾರ್ಟ್‌ಮೆಂಟ್ ಬಳಿಯ ಅಪಾರ್ಟ್‌ಮೆಂಟ್‌ನಿಂದ ಮೊಟ್ಟೆ ಎಸೆದಿದ್ದರಿಂದ ಲಘು ಉದ್ವಿಗ್ನತೆ ಉಂಟಾಗಿತ್ತು. ಈ ಘಟನೆಯಿಂದ ನಿವಾಸಿಗಳು ಮತ್ತು ಮೆರವಣಿಗೆಯ ಸದಸ್ಯರ ನಡುವೆ ವಾಗ್ವದ ನಡೆದು, ಸುಮಾರು 500 ಜನರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗಿದ್ದಾರೆ.
ಚಾದರ್‌ಘಾಟ್ ಮತ್ತು ಸಮೀಪದ ಠಾಣೆಗಳ ಪೊಲೀಸ್ ತಂಡಗಳು ಉದ್ರಿಕ್ತ ಗುಂಪನ್ನು ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಮೊಟ್ಟೆಯನ್ನು ಉದ್ದೇಶಪೂರ್ವಕವಾಗಿ ಎಸೆಯಲಾಗಿದೆಯೇ ಅಥವಾ ಆಕಸ್ಮಿಕವಾಗಿ ಎಸೆದಿದೆಯೇ ಎಂದು ನಿರ್ಧರಿಸಲು ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಶಾಂತಿ ಕಾಪಾಡಲು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಮಧ್ಯೆ ಸಿಕಂದರಾಬಾದ್‌ನ ವಾರಸಿಗುಡಾದಲ್ಲಿ ಮೆರವಣಿಗೆಯ ಸಮಯದಲ್ಲಿ 21 ಅಡಿ ಎತ್ತರದ ದುರ್ಗಾ ಮಾತೆಯ ಮೂರ್ತಿಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಭಕ್ತರು, ಪೊಲೀಸರು ಮತ್ತು ಅಧಿಕಾರಿಗಳು ಕ್ಷಿಪ್ರ ಕ್ರಮ ಕೈಗೊಂಡು ಬೆಂಕಿಯನ್ನು ತ್ವರಿತಗತಿಯಲ್ಲಿ ನಂದಿಸಿದ್ದಾರೆ. ಈ ಮೂಲಕ ದೊಡ್ಡ ಹಾನಿಯಾಗದಂತೆ ತಡೆದಿದ್ದಾರೆ.
Advertisement