
ನವದೆಹಲಿ: ರಾಯಬರೇಲಿಯಲ್ಲಿ ಹತ್ಯೆಗೀಡಾದ ದಲಿತ ಯುವಕನ ತಂದೆ ಮತ್ತು ಸಹೋದರನೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಅಸಹನೀಯ ದುಃಖದ ಈ ಸಮಯದಲ್ಲಿ ಅವರಿಗೆ ಸಂಪೂರ್ಣವಾಗಿ ಬೆಂಬಲವಾಗಿ ನಿಂತಿದ್ದಾರೆ ಎಂದು ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಖೇರಾ, ಭಯಾನಕ ಗುಂಪು ಹತ್ಯೆ ತೀವ್ರ ದು:ಖ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಸಂತ್ರಸ್ತನನ್ನು ದೊಣ್ಣೆ ಮತ್ತು ಬೆಲ್ಟ್‌ಗಳಿಂದ ನಿರ್ದಯವಾಗಿ ಹೊಡೆಯುತ್ತಿದ್ದಾಗಲೂ ತನ್ನ ಕೊನೆಯ ಭರವಸೆಯಾಗಿ ರಾಹುಲ್ ಗಾಂಧಿ ಅವರನ್ನು ನೆನಪಿಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯು"ರಾಯಬರೇಲಿಯನ್ನು ಪ್ರತಿನಿಧಿಸುವ ಮತ್ತು ಅಲ್ಲಿನ ಜನರನ್ನು ತನ್ನ ಕುಟುಂಬವೆಂದು ಪರಿಗಣಿಸುವ ರಾಹುಲ್ ಗಾಂಧಿ ಅವರಿಗೆ ತೀವ್ರವಾಗಿ ನೋವುಂಟು ಮಾಡಿದೆ. ಅವರು ವೈಯಕ್ತಿಕವಾಗಿ ಮೃತರ ತಂದೆ ಮತ್ತು ಸಹೋದರರೊಂದಿಗೆ ಮಾತನಾಡಲಿದ್ದುಈ ದುಃಖದ ಸಮಯದಲ್ಲಿ ಅವರೊಂದಿಗೆ ಸಂಪೂರ್ಣವಾಗಿ ಒಗ್ಗಟ್ಟಿನಿಂದ ನಿಂತಿದ್ದಾರೆ ಎಂದು ಖೇರಾ ಹೇಳಿದರು. ರಾಹುಲ್ ಗಾಂಧಿ ಪ್ರಸ್ತುತ ದಕ್ಷಿಣ ಅಮೆರಿಕಾದ ನಾಲ್ಕು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ.
ರಾಯಬರೇಲಿಯಲ್ಲಿ ದಲಿತ ಯುವಕ ಹರಿಓಂನನ್ನು ಕೆಲವು ಕ್ರಿಮಿನಲ್‌ಗಳು ಹೊಡೆದು ಕೊಂದಿರುವ ವೀಡಿಯೊವನ್ನು ನೋಡಿದೆ. ಆತ ಪದೇ ಪದೇ 'ರಾಹುಲ್ ಗಾಂಧಿ, ರಾಹುಲ್ ಗಾಂಧಿ' ಎಂದು ಹೇಳಿದಾಗ,ತಾವು ಯೋಗಿಯ ಬೆಂಬಲಿಗರು ಎಂದು ಆರೋಪಿಗಳು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಮತ್ತು ಮೋದಿಯವರ ಡಬಲ್ ಎಂಜಿನ್ ಮಾಡಿದ್ದು ಇದನ್ನೇ. ಅವರ ದ್ವೇಷದ ರಾಜಕಾರಣವು ದಲಿತರು ಮತ್ತು ದುರ್ಬಲರ ಜೀವವನ್ನು ಕಿತ್ತುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಶಾಮಾ ಮೊಹಮ್ಮದ್ ಆರೋಪಿಸಿದ್ದಾರೆ.
"ಮುಸ್ಲಿಮರು ದಾಳಿಗೆ ಒಳಗಾಗಿದ್ದಾರೆ. ಮಹಿಳೆಯರು ಅಸುರಕ್ಷಿತರಾಗಿದ್ದಾರೆ ಮತ್ತು ದಲಿತರು ಮತ್ತು ಒಬಿಸಿಗಳನ್ನು ಗುರಿಯಾಗಿಸಲಾಗುತ್ತಿದೆ - ಬಿಜೆಪಿ ಸರ್ಕಾರದ ಅಡಿಯಲ್ಲಿ ಯಾರೂ ಎಲ್ಲಿಯೂ ಸುರಕ್ಷಿತವಾಗಿಲ್ಲ" ಎಂದು ಅವರು ಹೇಳಿದರು. ಡ್ರೋನ್ ಕಳ್ಳನೆಂದು ತಪ್ಪಾಗಿ ಭಾವಿಸಿ ಹರಿಓಂನನ್ನು ಹತ್ಯೆ ಮಾಡಿದ ಆರೋಪದ ಮೇಲೆ ರಾಯಬರೇಲಿ ಪೊಲೀಸರು ಶನಿವಾರ ಐವರನ್ನು ಬಂಧಿಸಿದ್ದಾರೆ.
Advertisement